ಎ.18ರಂದು ಕಲಬುರಗಿಯಲ್ಲಿ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ರ್‍ಯಾಲಿ : ಅಶೋಕ್ ಬಗಲಿ

ಕಲಬುರಗಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಗಳನ್ನು ಖಂಡಿಸಿ ಎ.18ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಗರದಲ್ಲಿ ಜನಾಕ್ರೋಶ ರ್‍ಯಾಲಿ ನಡೆಯಲಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತೆರೆದ ವಾಹನದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಎಂಎಲ್ಸಿ ಎನ್.ರವಿಕುಮಾರ್, ಕೆ.ಎಸ್.ನವೀನ್, ಪಿ.ರಾಜೀವ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿಯೊಂದರ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಹಾಲಿನ ದರ ಏರಿಕೆ, ವಿದ್ಯುತ್ ದರ, ನೊಂದಣಿ ಶುಲ್ಕ ಹೆಚ್ಚಳ, ಮರಣೋತ್ತರ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ, ದತ್ತು ಸ್ವೀಕಾರ ಪತ್ರ, ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿಪಿ ಟಿಎಸ್ಪಿ ಹಣ ದುರ್ಬಳಕೆ ಸೇರಿದಂತೆ ಹತ್ತು ಹಲವು ಕಾಂಗ್ರೆಸ್ ನೀತಿಗಳ ವಿರುದ್ಧ ನಮ್ಮ ಜನಾಕ್ರೋಶ ಯಾತ್ರೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣಾ ಮ್ಯಾಕೇರಿ, ಸಂತೋಷ ಹಾದಿಮನಿ ಉಪಸ್ಥಿತರಿದ್ದರು.