ಕಲಬುರಗಿ | ʼರಾಷ್ಟ್ರೀಯ ಪಂಚಾಯತ್ ರಾಜ್ ದಿನʼ ಆಚರಣೆ
ಕಲಬುರಗಿ : ಇಲ್ಲಿನ ತಾಲ್ಲೂಕು ಪಂಚಾಯತ್ ಆವರಣದಲ್ಲಿ ʼರಾಷ್ಟ್ರೀಯ ಪಂಚಾಯತ್ ರಾಜ್ ದಿನʼವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 73ನೇ ಸಂವಿಧಾನ ತಿದ್ದುಪಡಿಯ ನಂತರ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಸ್ಥಾನಮಾನ ದೊರೆತಿದ್ದು, ಇದು ಪ್ರಜಾಪ್ರಭುತ್ವದ ಧೋರಣೆಯು ಗ್ರಾಮಮಟ್ಟದವರೆಗೂ ವ್ಯಾಪಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರ ಬಹುಮುಖ್ಯವಾಗಿದ್ದು, ಅದರಲ್ಲಿಯೂ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದ ವೇಳೆ 2024-25 ನೇ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ ಸೈಯದ್ ಪಟೇಲ್, ಸಹಾಯಕ ನಿರ್ದೇಶಕ ರೇವಣಸಿದ್ದಪ್ಪ ಗೌಡರ್, ಲೆಕ್ಕಾಧಿಕಾರಿ ಕವಿತಾ, ವ್ಯವಸ್ಥಾಪಕಿ ಬಸ್ಸಮ್ಮ, ಕಾರ್ಯದರ್ಶಿಗಳಾದ ಸುಧಾ ದಂಡೆ, ಅನುಪಮಾ, ವಿದ್ಯಾ, ಸಿಬ್ಬಡಿಗಳಾದ ಇಮಾಮ್ ಪಟೇಲ್ (SDAA), ಬಸವರಾಜ್ ಕವಲಗ, ಕರ ವಸೂಲಿಗಾರರು ನಾಗರಾಜ್, DEO ನಾಗರಾಜ್, ದೇವೇಂದ್ರ (TIEC), ಮೊಸಿನ್ ಖಾನ್ (TC & TAE), BFT, GKM, FA, ಕೂಸಿನ ಮನೆಗಳ ಕೆರ್ ಟೇಕರ್‌ಗಳು ಮತ್ತು ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.