ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಚೌಡಾಪುರ ಬೈಪಾಸ್ ರಸ್ತೆ ಕಾಮಗಾರಿ ವೀಕ್ಷಣೆ
ಕಲಬುರಗಿ : ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ-ಅಫಜಲ್‌ಪುರ ಮದ್ಯದಲ್ಲಿ ಚೌಡಾಪುರ ಗ್ರಾಮ ಬಳಿ ನಿರ್ಮಾಣ ಮಾಡಲಾಗುತ್ತಿರುವ ಬೈಪಾಸ್ ರಸ್ತೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರರಿಂದ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದಾತ ಮತ್ತು ಕೆ.ವಿ.ಕೆ.ಮುಖ್ಯಸ್ಥ ರಾಜು ತೆಗ್ಗೆಳ್ಳಿ ಅವರೊಂದಿಗೆ ಗಾಣಗಾಪುರ ಗ್ರಾಮದ ಸರ್ವೆ ನಂ.165 ಮತ್ತು 165ರಲ್ಲಿ ಮಳೆ ಇಲ್ಲದೆ 9 ಎಕರೆ ಪ್ರದೇಶದಲ್ಲಿ ಹಾಳಾಗಿರುವ ತೊಗರಿ ಬೆಳೆ ಹಾನಿ ಪರಿಶೀಲಿಸಿದ ಅವರು, ನಂತರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದರು. ಡಾ.ಅಭಿಶೇಕ್ ಅವರೊಂದಿಗೆ ಆರೋಗ್ಯ ಕೇಂದ್ರದ ಚಟುವಟಿಕೆ ಕುರಿತು ಚರ್ಚಿಸಿದರು.
ದತ್ತನ ದರ್ಶನ ಪಡೆದ ಡಿ.ಸಿ :
ದತ್ತನ ಕ್ಷೇತ್ರ ದೇವಲ ಗಾಣಗಾಪುರಕ್ಕೆ ಭೇಟಿ ನೀಡಿ ದತ್ತನ ದರ್ಶನ ಪಡೆದ ಡಿ.ಸಿ. ಅವರು, ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಲಾಗುತ್ತಿರುವುದರಿಂದ ದೇವಸ್ಥಾನದ ಹೊರಗಡೆ ಇರುವ ಅಂಗಡಿ-ಮುಂಗಟ್ಟುಗಳ ವ್ಯಾಪಾರಸ್ಥರೊಂದಿಗೆ ಧಾರ್ಮಿಕ ಸ್ಥಳದ ಅಭಿವೃದ್ದಿ ಕುರಿತಂತೆ ಚರ್ಚಿಸಿದರು. ಇದಲ್ಲದೆ ಯಾತ್ರಿಕ ನಿವಾಸ ನವೀಕರಣ ಕಾರ್ಯ ಸಹ ವೀಕ್ಷಿಣೆ ಮಾಡಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶಿವಕಾಂತಮ್ಮ ಇದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ರೈತರು ಗಾಣಗಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರು ಸರಿಯಾದ ರೀತಿಯಲ್ಲಿ ಸಂಗ್ರಹಣೆಯಾಗದ ಕಾರಣ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದಾಗ ಜಿಲ್ಲಾಧಿಕಾರಿಗಳು ಬ್ಯಾರೇಜ್ ವೀಕ್ಷಿಸಿದರು. ನಂತರ ಅತನೂರ ಬಳಿ ಗ್ರೀನ್ ಫೀಲ್ಡ್ ಮುಂಬೈ-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ್, ಲೊಕೋಪಯೋಗಿ ಇಲಾಖೆಯ ಎ.ಇ.ಇ. ಲಕ್ಷ್ಮೀಕಾಂತ ಬಿರಾದಾರ ಸೇರಿದಂತೆ ಇನ್ನಿತರ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.