ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿಗೆ ತಗುಲಿದ ಬೆಂಕಿ; ಅಪಾರ ಹಾನಿ

ಕಲಬುರಗಿ : ಶಹಾಬಾದ್ ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ವ್ಯಾಪಾರಿಯೊಬ್ಬರು ಸಂಗ್ರಹಿಸಿಟ್ಟ ಸುಮಾರು 200 ಕ್ವಿಂಟಾಲ್ ಹತ್ತಿ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾದ ಘಟನೆ ಶನಿವಾರ ನಡೆದಿದೆ.
ತೊನಸನಹಳ್ಳಿ(ಎಸ್) ಗ್ರಾಮದ ಸದಾಶಿವ ಮದ್ರಿಕಿ ಎನ್ನುವವರು ರೈತರಿಂದ ಸುಮಾರು 500 ಕ್ವಿಂಟಾಲ್ ಹತ್ತಿ ಖರೀದಿಸಿ, ಸಂಗ್ರಹ ಕೊಠಡಿಯಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಹತ್ತಿ ಬೆಲೆ ಕಡಿಮೆಯಾದ ಕಾರಣ ಬೆಲೆ ಬಂದಾಗ ಮಾರೋಣ ಎಂದು ಹತ್ತಿಯನ್ನು ಕೂಡಿಟ್ಟಿದ್ದರು. ಏಕಾಏಕಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ.
ಪ್ರಾರಂಭದಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪಕ್ಕದ ಕೊಠಡಿಯಲ್ಲಿರುವ ಕಿರಾಣಿ ಅಂಗಡಿಯಲ್ಲಿನ ಅವರ ಸಹೋದರ ಹಾಗೂ ಸ್ಥಳೀಯರು ನಂದಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಬೆಂಕಿ ಮುಂದೆ ಚಾಚುತ್ತ ಹೋಗಿದೆ. ಸಮಯಕ್ಕೆ ಸರಿಯಾಗಿ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
ಸುಮಾರು 500 ಕ್ವಿಂಟಾಲ್ ಹತ್ತಿಯಲ್ಲಿ 200 ಕ್ವಿಂಟಾಲ್ ಹತ್ತಿ ಸುಟ್ಟು ಕರಕಲಾಗಿದೆ. ಅಲ್ಲದೇ ಪಕ್ಕದ ಅವರದೇ ಕಿರಾಣಿ ಅಂಗಡಿಯ ಸಾಮಾನುಗಳು ಇನ್ನಿತರ ವಸ್ತುಗಳು ಸೇರಿ 15ರಿಂದ 20 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.