ಕಲಬುರಗಿ | ಹಳ್ಳಿಯ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ : ಸುನೀಲ ಪವಾರ

ಕಲಬುರಗಿ : ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರು ನುಡಿದ ʼಭಾರತದ ಆತ್ಮವು ಹಳ್ಳಿಯಲ್ಲಿ ವಾಸವಾಗಿದೆʼ ಎಂಬ ವಿಚಾರದಾರೆಯನ್ನು ನೆನೆದು, ಹಳ್ಳಿ ಮಟ್ಟದಲ್ಲಿ ಕಲ್ಯಾಣಾಭಿವೃದ್ಧಿ ಯೋಜನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನವಾದಲ್ಲಿ, ಹಳ್ಳಿಯ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುನೀಲ ಪವಾರ ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ ಆಚರಣೆಯಲ್ಲಿ ಸಸಿಗೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಕಾಯ್ದೆ ಅನುಸಾರ ರಚನೆಯಾಗಿರುವ ಗ್ರಾಮ ಪಂಚಾಯತ್‍ಗಳಲ್ಲಿ, ಗ್ರಾಮ ಸಭೆ, ಸಾಮಾನ್ಯ ಸಭೆಗಳ ಮೂಲಕ ಸ್ಥಳಿಯ ಅಭಿವೃದ್ಧಿಗೆ ನಿರ್ಣಯಗಳ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಸುಸಜ್ಜಿತ ಕೂಸಿನ ಮನೆ ನಿರ್ಮಿಸಿರುವುದರಿಂದ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಯಲ್ಲಿ ಅನುಕೂಲವಾಗಿದೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಕಟ್ಟಕಡೆಯ ಜನ ಸಾಮಾನ್ಯರಿಗೂ ಕೂಡಾ ತಲುಪಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಲೋಕತಂತ್ರ ವ್ಯವಸ್ಥೆ ಹಾಗೂ ಸ್ಥಳೀಯ ಆಡಳಿತ ಸದೃಢ ಮಾಡಲು ಕೈಜೊಡಿಸಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಸಿನ ಮನೆ ಯೋಜನೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುವ ಕಮಲಾಪೂರ ತಾಲೂಕಿನ ಜೀವಣಗಿ ಗ್ರಾ.ಪಂ, ಅಫಜಲಪೂರ ತಾಲ್ಲೂಕಿನ ಅಳ್ಳಗಿ ಗ್ರಾ.ಪಂ ಮತ್ತು ಚಿತ್ತಾಪೂರ ತಾಲ್ಲೂಕಿನ ಲಾಡ್ಲಾಪೂರ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಪಂಚತಂತ್ರ ಮೂಲಕ ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಫಜಲಪೂರ ತಾಲ್ಲೂಕಿನ ಕರಜಗಿ ಮತ್ತು ಅಳ್ಳಗಿ ಗ್ರಾ.ಪಂ, ಆಳಂದ ತಾಲ್ಲೂಕಿನ ಭೋದನ ಗ್ರಾಮ ಪಂಚಾಯತ್‍ಗಳ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಕುಮಾರ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಆವಿನಾಶ ಶಿಂಧೆ, ಜಿಲ್ಲಾ ಪಂಚಾಯತ್ ಡಿಆರ್‍ಡಿಎ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಶಾಖಾ ಮುಖ್ಯಸ್ಥರು, ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಲಬುರಗಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿಕಾಸ್ ಸಜ್ಜನ್ ವಂದಿಸಿದರು.