ಕಲಬುರಗಿ | ಶಾಸಕ ಸ್ಥಾನದಿಂದ ಯತ್ನಾಳ್‌ರನ್ನು ವಜಾಗೊಳಿಸುವಂತೆ ಆಗ್ರಹ
ಕಲಬುರಗಿ : ಬಸವಣ್ಣನವರ ನಾಡಿನಲ್ಲಿ ಹುಟ್ಟಿ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅವರಿಗೆ ಅಪಮಾನ ಮಾಡಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಲಿಂಗಾಯತ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆರ್.ಜಿ.ಶೆಟ್ಟಿಗಾರ್, ಲಿಂಗಾಯತ ಸಮುದಾಯದಲ್ಲಿ ಹುಟ್ಟಿ ಬಸವಣ್ಣನವರ ಇತಿಹಾಸ ತಿಳಿಯದೆ ಹರಕುಬಾಯಿಯ ಯತ್ನಾಳ್ ಅವರು ಬಸವಣ್ಣನವರ ಬಗ್ಗೆ ಅವಹೇಳನ ಮಾಡಿರುವುದು ಖಂಡನಾರ್ಹ, ಬಸವಣ್ಣನವರು ಇಚ್ಚಾಮರಣ ಹೊಂದಿದ್ದಾರೆ. ಅದಕ್ಕೆ ವಚನ ಸಾಹಿತ್ಯದಲ್ಲಿ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ. ಆದರೆ, ಯತ್ನಾಳ್ ಅವರು ಯಾವ ದಾಖಲೇ ಇಟ್ಟುಕೊಂಡು ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.
ವಿಶ್ವದ ಅನೇಕ ರಾಷ್ಟ್ರಗಳು ಬಸವಣ್ಣನವರ ತತ್ವಗಳಿಗೆ ಮಾರುಹೋಗಿ ಅವರನ್ನೇ ಅನುಷ್ಠಾನಗೊಳಿಸುತ್ತಿರುವಾಗ ಲಿಂಗಾಯತ ಧರ್ಮದ ಗಂಧವನ್ನು ಅರಿಯದೆ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಸವಣ್ಣನವರ ಮರಣದ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವ ಅಜ್ಞಾನಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಮುಖಂಡರಾದ ಸಂಗಮೇಶ ಗುಬ್ಬೆವಾಡ್, ಅಂಬಾರಾಯ ಬಿರಾದಾರ್, ಹಣಮಂತರಾವ್ ಪಾಟೀಲ್, ಅಶೋಕ ಘೂಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.