ಕಲಬುರಗಿ | ವಿದ್ಯಾರ್ಥಿ ಸಮೂಹದ ಅಚ್ಚುಮೆಚ್ಚಿನ ಪ್ರಾಧ್ಯಾಪಕ ಪ್ರೊ.ಎ.ಪಿ.ಹೊಸಮನಿ : ಪ್ರೊ.ಗೂರು ಶ್ರೀರಾಮುಲು

ಕಲಬುರಗಿ : ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಮೂಹದ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಪ್ರೊ.ಎ.ಪಿ.ಹೊಸಮನಿ ಅವರು ವಿದ್ಯಾರ್ಥಿ ಸಮುದಾಯದ ಶೈಕ್ಷಣಿಕ ಸಾಧನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಬೆಳವಣಿಗೆಗೆ ಇವರು ಸಲ್ಲಿಸುರುವ ಸೇವೆ ಶ್ಲಾಘನೀಯ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗೂರು ಶ್ರೀರಾಮುಲು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದ ಹಿರಿಯ ಪ್ರಾಧ್ಯಾಪಕ ಪ್ರೊ.ಎ.ಪಿ ಹೊಸಮನಿ ಅವರ ವಯೋನಿವೃತ್ತಿ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ವಿಭಾಗದ ಶೈಕ್ಷಣಿಕ ಹಿರಿಮೆ ಮತ್ತು ಉತ್ಕೃಷ್ಠ ಸಾಧನೆಗೆ ಇವರ ನಿರಂತರ ಬೋಧನೆ ಜೊತೆಗೆ ಸಂಶೋಧನಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಮಾರ್ಗದರ್ಶನ ಪಡೆದಿರುವ ಹಲವು ವಿದ್ಯಾರ್ಥಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿರುವ ಇವರ ವ್ಯಕ್ತಿತ್ವ ಮತ್ತು ಸರಳತೆ ವಿದ್ಯಾರ್ಥಿ ಸಮೂಹಕ್ಕೆ ಆದರ್ಶ ಎಂದು ಬಣ್ಣಿಸಿದರು.
ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ರಾಜನಾಳ್ಕರ್ ಲಕ್ಷ್ಮಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸಮನಿ ಅವರ ಶಿಸ್ತು, ಕರ್ತವ್ಯ, ನಿಷ್ಠೆ, ಸಂಘಟನಾ ಚಾತುರ್ಯ ಮತ್ತು ವಿಶ್ವವಿದ್ಯಾಲಯ ಹಾಗೂ ವಿಭಾಗಕ್ಕೆ ಸಲ್ಲಿಸಿದ ಸೇವೆ ಮತ್ತು ಕರ್ತವ್ಯವನ್ನು ಮುಕ್ತ ಕಂಠದಿಂದ ಕೊಂಡಾಡಿದರು.
ಬೆಳಗಾವಿ ರಾಣ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಬಿ.ಆಕಾಶ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಸಿ.ಎಸ್. ಬಸವರಾಜು, ಪ್ರೊ.ಬಿ.ವಿಜಯಾ, ಪ್ರೊ.ಬಿ.ಎಂ.ಕನ್ನಳ್ಳಿ, ಪ್ರೊ.ಶಿವಾಜಿ ವಾಘ್ಮೋರೆ ಅವರು ಮಾತನಾಡಿರು.
ಕಾರ್ಯಕಮದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರು ಹಾಗೂ ಪ್ರೊ.ಎ.ಪಿ ಹೊಸಮನಿ ಅವರ ಧರ್ಮಪತ್ನಿ ಭಾರತಿ ಹೊಸಮನಿ ಉಪಸ್ಥಿತರಿದ್ದರು.
ಪ್ರಿಯಾಂಕ ಪ್ರಾರ್ಥಿಸಿದರು, ಮಾಧುರಿ ವಾಘ್ಮೋರೆ ಅತಿಥಿ ಸ್ವಾಗತಿಸಿದರು, ವಿಜಯಲಕ್ಷ್ಮಿ ಅತಿಥಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿ ನಿಜಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.