ಕಲಬುರಗಿ | ಏ.3 ರಂದು ಪ್ರಥಮ ರಂಗ ಸಾಹಿತ್ಯ ಸಮ್ಮೇಳನ : ತೆಗಲತಿಪ್ಪಿ

Update: 2025-04-01 17:59 IST
Photo of Press meet
  • whatsapp icon

ಕಲಬುರಗಿ : ಇಂದಿನ ಸಮಾಜದ ಕನ್ನಡಿಯಂತಿರುವ ಮತ್ತು ಸಮಾಜದ ಪರಿವರ್ತನೆಗೆ ಸಾಂಸ್ಕೃತಿಕ ಮಾಧ್ಯಮವಾಗಿರುವ ರಂಗಭೂಮಿ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಏ.3 ರಂದು ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಆಯೋಜಿಸಿರುವ ಒಂದು ದಿನದ ಜಿಲ್ಲಾ ಮಟ್ಟದ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ಅವರು, ರಂಗಭೂಮಿಯಲ್ಲಿ ಹೊಸ ಪೀಳಿಗೆಯನ್ನು ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕದಲ್ಲೇ ಇದೊಂದು ಹೊಸ ಪ್ರಯೋಗವಾಗಿದೆ. ರಂಗ ಕಲೆ ಮತ್ತು ಅದರ ಸಾಹಿತ್ಯ ನಮ್ಮ ಜೀವನದ ಕ್ರಮಗಳಾಗಿವೆ. ಈ ಜೀವನ ಒಂದು ನಾಟಕ ಕಲೆ ಎನ್ನಬಹುದಾಗಿದೆ. ಇಂಥ ಬಣ್ಣದ ಬದುಕನ್ನು ಅರ್ಥಪೂರ್ಣಗೊಳಿಸಲು ಈ ಸಮ್ಮೇಳನ ಮುಖ್ಯವಾಗಿದೆ. ಇಂಥ ರಂಗ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದೆ ಎಂದರು.

ರಂಗಭೂಮಿ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಹಿರಿಯ ರಂಗಕರ್ಮಿ ನಾನಾಸಂ ನ ಮುಖ್ಯಸ್ಥರೂ ಆದ ಅಳ್ಳೋಳ್ಳಿ ಗದ್ದುಗೆಮಠದ ನಾಗಪ್ಪಯ್ಯ ಮಹಾಸ್ವಾಮಿಗಳವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ರಚಿಸಿದ ಸ್ವಾಗತ ಸಮಿತಿಗೆ ರಾಜುಗೌಡ ನಾಗನಹಳ್ಳಿ, ಗಿರಿರಾಜ ಯಳಮೇಲಿ, ರಮೇಶ ಚಿಚಕೋಟಿ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಗಿದೆ. ಏ.3 ರಂದು ಬೆಳಗ್ಗೆ 9.30 ಕ್ಕೆ ಸರದಾರ್‌ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಲಿದ್ದು, ಹಿರಿಯ ನಾಟಕಕಾರ ರಮಾನಂದ ಹಿರೇಜೇವರ್ಗಿ ಚಾಲನೆ ನೀಡಲಿದ್ದು, ನರಸಿಂಗರಾವ ಹೇಮನೂರ, ಅಶೋಕ ಸೊನ್ನ ವಿಶೇಷ ಅತಿಥಿಗಳಾಗಿರುವರು ಎಂದರು.

ನಾಟಕಕಾರ ಲಿಂ.ಕೋಡ್ಲಿ ಕಂಟೆಪ್ಪ ಮಾಸ್ತರ್ ವೇದಿಕೆಯಡಿಯಲ್ಲಿ 11.15ಕ್ಕೆ ಜರುಗುವ ಸಮ್ಮೇಳನವನ್ನು ಲೇಖಕ ಡಾ.ವಿಕ್ರಮ್ ವಿಸಾಜಿ ಉದ್ಘಾಟಿಸಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಪ್ರಾಧ್ಯಾಪಕಿ ಡಾ.ಮೈತ್ರಾಬಾಯಿ ಹಳೆಮನಿ, ರಾಮಚಂದ್ರ ರೆಡ್ಡಿ ಗುಮ್ಮಟ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ 12.45 ಕ್ಕೆ ನಡೆಯುವ ರಂಗಾಂತರಾಳ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು-ಸಾಧನೆ ಕುರಿತು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ರಂಗಭೂಮಿ: ಸಮಕಾಲಿನ ತಲ್ಲಣಗಳು ಕುರಿತು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಗ್ರಾಮೀಣ ರಂಗಭೂಮಿಯ ಸವಾಲುಗಳು ಕುರಿತು ರಂಗಕರ್ಮಿ ಶಿವಣ್ಣ ಹಿಟ್ಟಿನ್ ಅವರು ಮಾತನಾಡಲಿದ್ದಾರೆ. ಮಕ್ಕಳ ಕವಿ ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಸೂರ್ಯಕಾಂತ ಜಮಾದಾರ ಆಶಯ ನುಡಿಗಳನ್ನಾಡುವರು. ಡಾ.ಶರಣಬಸಪ್ಪ ಕ್ಯಾತನಾಳ, ಹಣಮಂತಪ್ರಭು, ಶಂಕರಜೀ ಹಿಪ್ಪರಗಿ, ಡಾ. ವಿಶ್ವರಾಜ ಪಾಟೀಲ, ಸುರೇಶ ಪಾಟೀಲ ಜೋಗೂರ, ಪ್ರಭುಲಿಂಗ ಕಿಣಗಿ, ಶಿವರಾಜ ಇಂಗಿನಶೆಟ್ಟಿ, ಸುನೀಲ ಹುಡಗಿ ಉಪಸ್ಥಿತರಿರುವರು ಎಂದರು.

ಸಮ್ಮೇಳನದ ಮಧ್ಯದಲ್ಲಿ ಪ್ರಮುಖ ಕಲಾ ತಂಡಗಳಾದ ಲೋಹಿಯಾ ಕಲಾ ತಂಡ, ವಿಶ್ವರಂಗ, ಅಮತರಂಗ ಕಲಾ ತಂಡ, ಅಮೃತಪ್ಪ ಅಣೂರ ಕವಿಗಳು, ಜ್ಯೋತಿ ಮಾರ್ಲಾ ಹಾಗೂ ತಂಡದವರಿಂದ ವಿವಿಧ ರಂಗ ಪ್ರದರ್ಶನಗಳು ಜರುಗಲಿವೆ. ಇಳಿಹೊತ್ತು 3.45 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಸಮಾರೋಪ ನುಡಿಗಳನ್ನಾಡಲಿದ್ದು, ಶ್ರೀಧರ ಹೆಗಡೆ, ಆರ್.ಎಸ್.ದೊಡ್ಮನಿ, ದೇವೀಂದ್ರ ದೇಸಾಯಿ ಕಲ್ಲೂರ ವಿಶೇಷ ಅತಿಥಿಗಳಾಗಿರುವರು. ಬಿ.ಸಂದೀಪ, ಕುಪೇಂದ್ರ ಬರಗಾಲಿ, ರಮೇಶ ತಿಪ್ಪನೂರ, ಶಾಂತಕುಮಾರ ಪಾಟೀಲ ನಂದೂರ, ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ, ಎಸ್.ಎನ್. ದಂಡಿನಕುಮಾರ ಉಪಸ್ಥಿತರಿರುವರು. ರಂಗಭೂಮಿ ಕ್ಷೇತ್ರದ ಜಿಲ್ಲೆಯ ಅನೇಕ ಸಾಧಕರನ್ನು ಸತ್ಕರಿಸಲಾಗುವುದೆಂದು ವಿವರಿಸಿದರು.

ರಂಗ ಕ್ಷೇತ್ರದ ದಿಗ್ಗಜರಾದ ಲಿಂಗ್ಯಕ್ಯರಾದ ಎಲ್.ಬಿ.ಕೆ.ಆಲ್ದಾಳ ಕವಿಗಳು, ರಾಚಣ್ಣ ಕರದಾಳ. ಭೀಮರಾವ ತಿಳಗೂಳ ಅವರ ಹೆಸರಿನ ಮೇಲೆ ದ್ವಾರಗಳನ್ನು ನಿರ್ಮಿಸಿ ಸ್ಮರಿಸಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಎಂ.ಎನ್. ಸುಗಂಧಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News