ಕಲಬುರಗಿ | ಎಸ್.ಎಂ.ಕೃಷ್ಣ ನಿಧನಕ್ಕೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸಂತಾಪ
ಕಲಬುರಗಿ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನದಿಂದ ಒಬ್ಬ ಅಪರೂಪದ ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ನೀರಾವರಿಗೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಅವರು, ಕೆಬಿಜೆಎನ್‌ಎಲ್ ಕರ್ನಾಟಕ ನೀರಾವರಿ ನಿಗಮ ಸ್ಥಾಪನೆ ಕಾರಣಿಕರ್ತರಾಗಿದ್ದರು ಎಂದು ಎಸ್.ಎಂ.ಕೃಷ್ಣ ಅವರ ಆಡಳಿತ, ಕಾರ್ಯ ವೈಖರಿಯನ್ನು ಕೊಂಡಾಡಿದ್ದಾರೆ.
ನಮ್ಮ ಬೆಂಗಳೂರಿಗೆ 'ಐಟಿ' ತವರು ಎಂಬ ಬಿರುದು ಸಿಗುವಲ್ಲಿ ಎಸ್.ಎಂ.ಕೃಷ್ಣ ಅವರ ಪಾತ್ರ ಕೂಡ ದೊಡ್ಡದು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಐಟಿ ಕಂಪನಿಗಳಿಗೆ ಬೇಕಾದ ವ್ಯವಸ್ಥೆಗಳ ಮಾಡಿದ್ದರು. ಕರ್ನಾಟಕದ ರಾಜ್ಯದಲ್ಲಿ ಐಟಿ ಕಂಪನಿಗಳು ನೆಲೆಯೂರಲು ಬೇಕಿದ್ದ, ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಮಾಡಲಾಗಿತ್ತು. ಈ ಮೂಲಕ ಕೋಟ್ಯಂತರ ಉದ್ಯೋಗದ ಸೃಷ್ಟಿಗೂ ಎಸ್.ಎಂ.ಕೃಷ್ಣ ಅವರು ಕಾರಣವಾಗಿದ್ದರು ಎಂದು ತಿಳಿಸಿದ್ದಾರೆ.
ಎಸ್‌ಎಂಕೆ ಸರ್ಕಾರ ಕೂಡ ಐಟಿ ಕಂಪನಿಗಳಿಗೆ ಬೇಕಾದ ರೀತಿಯಲ್ಲಿ ನಿಮಯಗಳ ರೂಪಿಸಿ ಕನ್ನಡ ನಾಡಲ್ಲಿ ಐಟಿ ಮತ್ತು ಬಿಟಿ ಕಂಪನಿಗಳು ಬಂದು ನೆಲೆಯೂರುವಂತೆ ಮಾಡಿದ್ದರು. ಹೀಗೆ ಬೆಂಗಳೂರಿನ ಮತ್ತು ಕರ್ನಾಟಕದ ಐಟಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಎಸ್.ಎಂ.ಕೃಷ್ಣ ಅವರ ಈ ಸಾಧನೆಗಳು ಸಾಕಷ್ಟು ಸಹಾಯ ಮಾಡಿದ್ದವು ಎಂದು ಹೇಳಿದ್ದಾರೆ.