ಕಲಬುರಗಿ | ಸಫಲ ನಾಯಕತ್ವಕ್ಕೆ ಉನ್ನತ ಶಿಕ್ಷಣ ಪೂರಕ : ಡಾ.ಲಂಡನಕರ್

Update: 2025-02-01 21:16 IST
Photo of Program
  • whatsapp icon

ಕಲಬುರಗಿ : ಸಫಲ ನಾಯಕತ್ವದ ಗುಣ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪ್ರಧಾನ ಪಾತ್ರ ನಿರ್ವಹಿಸುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಮೇಶ್ ಲಂಡನಕರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೇಡಂ ರಸ್ತೆಯ ಬುದ್ಧ ವಿಹಾರದ ಪಾಲಿ ಅಧ್ಯಯನ ಸಂಸ್ಥೆ ಆವರಣದಲ್ಲಿ ನಡೆದ ಒಂದು ವಾರದ ಅವಧಿಯ ಕಲಬುರಗಿ ವಿಭಾಗ ಮಟ್ಟದ ಬಾಲಕ-ಬಾಲಕಿಯರ ಎನ್.ಎಸ್.ಎಸ್ ನಾಯಕತ್ವ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ನಾಯಕತ್ವ ಗುಣ ನಮ್ಮೊಳಗೆ ಅಂತರ್ಗತವಾಗಬೇಕಾದರೆ ಮೊದಲು ಶಿಸ್ತು ಮತ್ತು ಸಂಯಮ ಇರಬೇಕಾಗುತ್ತದೆ. ಇದರ ಜೊತೆಗೆ ಸಮಯ ನಿರ್ವಹಣೆಯ ಮಹತ್ವ ಅರಿತಿದ್ದಾದರೆ ಸಕಾರಾತ್ಮಕ ಬೆಳವಣಿಗೆಯಲ್ಲಿ ತೊಡಗಲು ಬೇಕಾದ ನಾಯಕತ್ವ ಗುಣ ತಾನೇ ತಾನಾಗಿ ನಮ್ಮೊಳಗೆ ಒಡ ಮೂಡುತ್ತದೆ ಎಂದರು.

ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಸಿದ್ಧಾರ್ಥ ವಿಹಾರ ಟ್ರಸ್ಟ್ ಆಡಳಿತಾಧಿಕಾರಿ ಆರ್.ಕೆ.ಬೇಗಾರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯದ ಮಹತ್ವ ಅರಿತು ಶಿಸ್ತುಬದ್ಧ ಅಧ್ಯಯನಕ್ಕೆ ಒತ್ತು ನೀಡಿದರೆ ಉನ್ನತ ಸ್ಥಾನಗಳನ್ನು ಅಲಂಕರಿಸುವುದು ಕಷ್ಟವಾಗುವುದಿಲ್ಲ. ಆದರೆ, ವಿದ್ಯಾರ್ಥಿ ಜೀವನ ಎಂಬುದು ಕೇವಲ ಹುಡುಗಾಟಕ್ಕೆ ಮಾತ್ರ ಸೀಮಿತ ಎಂಬಂತೆ ವರ್ತಿಸಿದ್ದಾದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಕುಟುಂಬ ಮತ್ತು ಸಮಾಜಕ್ಕೆ ಹೊರೆಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸುಜಾತ ಬಿರಾದಾರ್ ಮಾತನಾಡಿ, ನಾಯಕತ್ವ ಎಂಬುದು ಹೊಣೆಗಾರಿಕೆ ಬಯಸುತ್ತದೆ. ಯಾವ ವ್ಯಕ್ತಿಯಲ್ಲಿ ಹೊಣೆಗಾರಿಕೆ ಪ್ರಜ್ಞೆ ಜಾಗೃತವಾಗಿರುತ್ತದೋ ಆತ ಉತ್ತಮ ನಾಯಕನಾಗಿ ಗುರುತಿಸಿಕೊಳ್ಳುತ್ತಾನೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದರು.

ಸರಕಾರಿ ಪದವಿ ಪೂರ್ವ ಕಾಲೇಜಿನ (ಎಂ.ಪಿ.ಎಚ್.ಎಸ್) ಪ್ರಾಚಾರ್ಯ ಶಂಶುದ್ದೀನ್ ಪಟೇಲ್, ಡಾ.ಬುರ್ಲಿ ಪ್ರಹ್ಲಾದ, ಪತ್ರಕರ್ತ ಮಹೇಶ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಆರಂಭದಲ್ಲಿ ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಹಾಗೂ ಶಿಬಿರದ ಅಧಿಕಾರಿ ಪಾಂಡು ಎಲ್.ರಾಠೋಡ್ ಶಿಬಿರದ ವರದಿ ವಾಚಿಸಿದರು.

ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದು ವಾರದ ನಾಯಕತ್ವ ಶಿಬಿರದಲ್ಲಿ ತಮಗೆ ಪ್ರೇರಣೆ ನೀಡಿದ ಸಕಾರಾತ್ಮಕ ಅಂಶಗಳ ಕುರಿತು ಮಾತನಾಡಿದರು. ಕಲಬುರಗಿ ದರ್ಶನ ಕುರಿತು ಗಮನ ಸೆಳೆಯುವ ಪ್ರಬಂಧ ಬರೆದ ವಿದ್ಯಾರ್ಥಿಗಳಿಗೆ ಡಾ.ಸಿದ್ದಲಿಂಗಪ್ಪ ವೈಯಕ್ತಿಕವಾಗಿ ನಗದು ಬಹುಮಾನ ಪ್ರದಾನ ಮಾಡಿ ಹುರಿದುಂಬಿಸಿದರು. ಕೊಪ್ಪಳ ಜಿಲ್ಲಾ ನೋಡಲ್ ಅಧಿಕಾರಿ ಡಾ.ನಾಗರಾಜು ಹೀರಾ ನಿರೂಪಿಸಿದರು. ಚಂದ್ರಶೇಖರ ಡೊಣ್ಣೆಗೌಡ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಅಂಬಾರಾಯ ಎಸ್.ಹಾಗರಗಿ, ರುದ್ರೇಶ, ಎಚ್.ಬಿ.ಪಾಟೀಲ್, ಪ್ರಕಾಶ್ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News