ಕಲಬುರಗಿ | ಎಚ್.ಕಾಂತರಾಜು ವರದಿಯಿಂದ ಕೋಲಿ ಸಮುದಾಯಕ್ಕೆ ಅನ್ಯಾಯ: ಶರಣಪ್ಪ ತಳವಾರ ಆರೋಪ

Update: 2025-04-17 15:21 IST
Photo of Press meet
  • whatsapp icon

ಕಲಬುರಗಿ : ಎಚ್.ಕಾಂತರಾಜುರವರ ನೇತೃತ್ವದ ಆಯೋಗವು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯ ಮಾಹಿತಿ ಆಧರಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಅಂಕಿ-ಸಂಖ್ಯೆಯನ್ನು ಅವೈಜ್ಞಾನಿಕವಾಗಿ ತಿರುಚಿ ಅತ್ಯಂತ ಹಿಂದುಳಿದ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಶರಣಪ್ಪ ತಳವಾ‌ರ್ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪತ್ರಿಕೆಗಳಲ್ಲಿ ಬಂದಿರುವ ಮಾಹಿತಿ ಪ್ರಕಾರ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳ ಒಟ್ಟು ಜನಸಂಖ್ಯೆ ಕೇವಲ 14.5 ಲಕ್ಷ ಎಂದಿದೆ. ಅದರಲ್ಲಿ ಬೆಸ್ತ (3,99,383) ಅಂಬಿಗ (1,34,230), ಗಂಗಾಮತ ( (73,627), ಕಬ್ಬೇರ್/ ಕಬ್ಬೇರ (58,289), ಕಬ್ಬಲಿಗ (3,88,082) ಮೊಗವೀರ (1,21,478) ಎಂದು ತೋರಿಸಲಾಗಿದೆ. ಕರ್ನಾಟಕ ಸರಕಾರದ ಮೀಸಲಾತಿ ಆದೇಶದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳನ್ನು ಹಿಂದುಳಿದ ಜಾತಿಗಳಲ್ಲಿ (ಬಿ.ಸಿ.ಟಿ) ಸೇರಿಸಲಾಗಿತ್ತು. ನಂತರ 1994 ರಲ್ಲಿ ಚಿನ್ನಪ್ಪರೆಡ್ಡಿ ವರದಿಯನುಸಾರ ಇದೇ ಜಾತಿಯ 39 ಪರ್ಯಾಯ ಪದಗಳನ್ನು ಪ್ರವರ್ಗ-1 ರ ಗುಂಪಿನಲ್ಲಿ ಸೇರಿಸಲಾಯಿತು. ಈ ಎಲ್ಲಾ ಪರ್ಯಾಯ ಪದಗಳು ಕರ್ನಾಟಕದಾದ್ಯಂತ ಒಟ್ಟಾಗಿ ನೋಡಿದರೆ 35-40 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೋಲಿ-ಕಬ್ಬಲಿಗರದೆ 6-7 ಲಕ್ಷ ಜನಸಂಖ್ಯೆ ಇದೆ. ಅದೇ ರೀತಿ ರಾಯಚೂರು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ಮಂಗಳೂರು, ಉಡುಪಿ, ಕಾರವಾರ, ಮಂಡ್ಯ, ಮೈಸೂರು, ಮುಂತಾದ ಜಿಲ್ಲೆಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಈ ಸಮುದಾಯ ಹೊಂದಿದೆ ಎಂದರು .

ಇದು ಅಲ್ಲದೆ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರ್ಪಡೆಯಾಗಲು ಕೋಲಿ, ಕಬ್ಬಲಿಗ, ಬೆಸ್ತ ಮತ್ತು ಇದರ ಪರ್ಯಾಯ ಪದಗಳು ಎಲ್ಲಾ ಅರ್ಹತೆ ಹೊಂದಿದ್ದರೂ, ರಾಜ್ಯ ಸರಕಾರಗಳ ಬೇಜವಾಬ್ದಾರಿ ಮತ್ತು ನಿರಾಶಕ್ತಿಯ ಕಾರಣದಿಂದ ಅನ್ಯಾಯಕ್ಕೆ ಒಳಗಾಗಿವೆ. ಇನ್ನು ಕಾಂತರಾಜು ವರದಿಯನುಸಾರ ಕೋಲಿ, ಕಬ್ಬಲಿಗ, ಬೆಸ್ತ ಜಾತಿಗಳನ್ನು ಕೇವಲ 14.5 ಲಕ್ಷ ಎಂದು ತೋರಿಸಿರುವುದರಿಂದ ಈ ಸಮುದಾಯದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಈ ವರದಿಯನ್ನು ಸರಿಪಡಿಸದಿದ್ದರೆ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಅಮೃತ ಎಚ್.ಡಿಗ್ಗಿ, ಶಿವಶರಣಪ್ಪ ಜಮಾದಾರ, ಸುರೇಶ ಹೂಡಗಿ, ತುಕ್ಕಪ್ಪ ಸುಲೇಪೇಟ, ಪ್ರಭು ಪಂಗರಗಿ ಸೇರಿದಂತೆ ಇನ್ನಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News