ಕಲಬುರಗಿ | ತಮಟೆ ಚಳವಳಿ ಮೂಲಕ ಒಳ ಮೀಸಲಾತಿ ಜಾರಿಗೆ ಒತ್ತಾಯ

Update: 2024-12-14 13:29 GMT

ಕಲಬುರಗಿ : ರಾಜ್ಯ ಸರಕಾರ ಕಾಲಹರಣ ಮಾಡದೇ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರು ಶನಿವಾರ ಅಳಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶನಿವಾರ ತಮಟೆ ಚಳವಳಿ ನಡೆಸಿದರು.

ಆಳಂದ ಪಟ್ಟಣದ ಬಸ್ ನಿಲ್ದಾಣದಿಂದ ಸುಮಾರು 5 ಕಿ.ಮೀ ಅಂತರದ ತಾಲೂಕು ಆಡಳಿತಸೌಧವರೆಗೆ ತಮಟೆ ಚಳವಳಿಯ ಮೂಲಕ ಪ್ರತಿಭಟನೆ ನಡೆಸಿದ ಮಾದಿಗ ಸಮುದಾಯದ ಮುಖಂಡರು, ಒಳಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕಲಾಗಿದೆ ಎಂದು ರಾಜ್ಯ ಸರಕಾರ ವಿರುದ್ಧ ಘೋಷಣೆ ಕೂಗಿದರು.

ಡಾ.ಬಾಬು ಜಗಜೀವನರಾಮ್ ಅವರ ಅಭಿಮಾನಿಗಳ ಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಬರಾಯ ಎಂ.ಕೆ.ಚಲಗೇರಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಒಳ ಮೀಸಲಾತಿ ಒತ್ತಡಕ್ಕೆ ಮಣಿದು ಸರಕಾರ ಕಾಟಾಚಾರದ ಆಯೋಗ ನೇಮಕದ ನಾಟಕವಾಡುತ್ತಿದೆ. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ವಂಚಿಸುವುದನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಮ್ ಕಾಲದಿಂದಲೂ ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ. ಒಳ ಮೀಸಲಾತಿ ಜಾರಿ ಆಗುವವರೆಗೂ ಸರಕಾರಿ ನೇಮಕಾತಿ ಮಾಡಕೊಡದು ಎಂದು ಒತ್ತಾಯಿಸಿದರು.

ಯುವ ಮುಖಂಡ ಸಿದ್ಧು ನಾವದಗಿ ಮಾತನಾಡಿ, ಒಳ ಮೀಸಲಾತಿ ಜಾರಿಗಾಗಿ ಸದನದಲ್ಲಿ ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಾರಿಗೆ ತರಲು ಒತ್ತಡಹಾಕಬೇಕು. ಒಳಮೀಸಲಾತಿಗೆ ಆಗ್ರಹಿಸಿ ಮಾದಿಗ, ಸಮಗಾರ, ಮಚಗಾರ, ಡೊಹರ, ಡಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟವು ಇಂದು ರಾಜ್ಯದ ಎಲ್ಲ ಶಾಸಕರ ಮನೆಯ ಮುಂದೆ ತಮಟೆ ಚಳವಳಿ  ನಡೆಸಲಾಗುತ್ತಿದೆ. ಶಾಸಕರುಗಳು ಸದನದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕಳೆದ ಆಗಷ್ಟ್ 1ರಂದು ಸುಪ್ರೀಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವು ಆಯಾ ರಾಜ್ಯ ಸರಕಾರಗಳಿಗೆ ಕೊಟ್ಟು ಈಗ 4 ತಿಂಗಳಾದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಾಜ ಮುಖಂಡ ಕೃಷ್ಣಾ ಪಾತ್ರೆ, ಕರಬಸಪ್ಪ ಬೊಮ್ಮನಳ್ಳಿ, ಮಹೇಂದ್ರ ಲೋಕಂಡೆ, ಗ್ರಾಪಂ ಸದಸ್ಯ ಮಹಾದೇವ ಹತ್ತಗಾಳೆ, ಮಹೇಂದ್ರ ಕ್ಷೀರಸಾಗರ, ಲಕ್ಕಪ್ಪ ದಣ್ಣೂರ, ರಾಜು ಗೊಳೋಳ್ಳಿ, ಓಂ ಪ್ರಕಾಶ ಪಾತ್ರೆ, ಸಂದೇಶ ಪಾತ್ರೆ ಇನ್ನಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News