ಕಲಬುರಗಿ | ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ : ನಾಯಕರ ಬಂಧನಕ್ಕೆ ಒತ್ತಾಯ

Update: 2024-12-13 16:59 GMT

ಕಲಬುರಗಿ : ನಗರದಲ್ಲಿ ಇತ್ತೀಚೆಗೆ ಸಕಲ ಹಿಂದೂ ಸಮಾಜ ಸಂಘಟನೆ ಮತ್ತು ಬಂಜಾರ ಸಮುದಾಯದಿಂದ ನಡೆದಿದ್ದ ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಮಾಜಿ ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಅವರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಜಾಯಿಂಟ್ ಆಕ್ಷನ್ ಕಮೀಟಿಯು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುವ ಪ್ರತಿಭಟನೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡಬಾರದು. ಪ್ರತಿಭಟನೆಗಳ ನೆಪದಲ್ಲಿ ಕೆಲವು ಮುಖಂಡರುಗಳು ಮುಸ್ಲಿಂ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಅವಹೇಳನ ಮಾಡಿ, ದ್ವೇಷ ಭಾಷಣಗಳನ್ನು ನಡೆಸುತ್ತಿದ್ದಾರೆ, ಇದರಿಂದ ಇಲ್ಲಿನ ಸೌಹಾರ್ದ ಪರಂಪರೆಗೆ ಧಕ್ಕೆ ತರುತ್ತಿದೆ ಎಂದು ಸಮಿತಿ ಹೇಳಿದೆ.

ಯಡ್ರಾಮಿಯಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಕನೋರ್ವ ಅತ್ಯಾಚಾರ ಎಸಗಿರುವ ಕೃತ್ಯ ಖಂಡನೀಯ. ಈ ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಮುಸ್ಲಿಂ ಸಮುದಾಯವನ್ನು ದೂಷಿಸುವ ಇಂತಹ ಪ್ರತಿಭಟನೆಗಳನ್ನು ಸಮಿತಿ ಖಂಡಿಸುತ್ತದೆ ಎಂದು ತಿಳಿಸಿದೆ.

ಕಲಬುರಗಿಯು ಸೌಹಾರ್ದ ಸಂಸ್ಕೃತಿಯಿಂದ ಬೆಳೆದು ಬಂದಿದೆ, ಇಂತಹ ನೆಲದಲ್ಲಿ ಕೋಮುದ್ವೇಷ ಹರಡಿಸುವುದನ್ನು ನಿಲ್ಲಿಸಬೇಕು, ಕೋಮು ದ್ವೇಷ ಹರಡಿಸಿ, ಇಲ್ಲಿನ ಸೂಫಿ, ಶರಣ ಪರಂಪರೆಗೆ ಧಕ್ಕೆ ತರುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಮುಹಮ್ಮದ್ ನೂಹ್, ಅಫ್ಜಲ್ ಮುಹಮ್ಮದ್, ಅಬ್ದುಲ್-ಜಬ್ಬಾರ್ ಗೋಲಾ, ಖಾಜಿ-ರಿಜ್ವಾನ್ - ಉರ್-ರಹಮಾನ್ ಸಿದ್ದಿಕಿ, ಖಾಜಾ ಸದ್ರುದ್ದೀನ ಪಟೇಲ್, ತಾಹೆರ್ ಅಲಿ, ಅಬಿದ್ ಹುಸೇನ್, ಹೈದರ್ ಅಲಿ ಬಗ್ಬರ್, ಮುಬೀನ್ ಅಹಮದ್, ಮುನ್ನಾ ಧಾರವಾಡ ಸೇರಿದಂತೆ ಇನ್ನಿತರರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News