ಕಲಬುರಗಿ | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕಲಬುರಗಿ : ಆಳಂದ ಪಟ್ಟಣದಲ್ಲಿ ಆಲ್ ಇಂಡಿಯಾ ಕಿಸಾನ್ ಸಭಾ ಹಾಗೂ ಆಲ್ ಇಂಡಿಯಾ ತಂಜೀಮ್-ಇ-ಇನ್ಸಾಫ್ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ಕೈಕೊಂಡು ಅಲ್ಲಿನ ಪ್ರವಾಸಿ ಮಂದಿರ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಿಸಾನಸಭಾ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ ಅವರು ಮಾತನಾಡಿ, ಬಡ ಕೂಲಿ ಕಾರ್ಮಿಕರನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅನ್ಯಾಯಕಾರಿ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಕೂಲಿ ಕಾರ್ಮಿಕರಿಗೆ ಸಾಲ ನೀಡುವುದರ ಮುಖಾಂತರ ವಸತಿ ಸಾಮಾನುಗಳು, ಮಾಸ್ಟರ್ ಕೀಟ್, ಕೂಲರ್, ಮೊಬೈಲ್, ಪೀಚ್, ವಾಶಿಂಗ್ ಮಷಿನ್ ಮುಂತಾದವುಗಳನ್ನು ದುಬಾರಿ ದರದಲ್ಲಿ ಹೊರೆ ಹಾಕುತ್ತಿವೆ. ಈ ಸಂಸ್ಥೆಗಳ ನಡುವೆ ಚೈತನ್ಯ ಸ್ಪಂದನ, ನವಚೇತನ, ಸೂರ್ಯೋದಯ, ಭಾರತ್ ಪೈನಾನ್ಸ್, ಧರ್ಮಸ್ಥಳ, ಪರಿಮಳ, ಹೆಚ್‌ಡಿಎಫ್‌ಸಿ ಮತ್ತು ಇಕೂಟೆಕ್ಸ್ ಪೈನಾನ್ಸ್‌ಗಳು ಪ್ರಮುಖವಾಗಿ ಬಡವರಿಗೆ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಣಕಾಸು ವಹಿವಾಟಿನ ಸಂಪೂರ್ಣ ಪರಿಶೀಲನೆ ಮಾಡಬೇಕು. ಮೀಟರ್ ಬಡ್ಡಿಯ ಅಸಹ್ಯ ಶೋಷಣೆಯನ್ನು ತಕ್ಷಣವೇ ನಿಲ್ಲಿಸಬೇಕು. ಬಡ ಕೂಲಿ ಕಾರ್ಮಿಕರಿಗೆ ಸಮರ್ಥ ಉಳಿತಾಯ ಸಾಧನೆಗಾಗಿ ನೇರ ಹಣಕಾಸು ನೆರವು ನೀಡಬೇಕು. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನಸಭಾ ತಾಲ್ಲೂಕು ಅಧ್ಯಕ್ಷ ಚಂದ್ರಕಾoತ ಖೋಬ್ರೆ, ನಗರ ಅಧ್ಯಕ್ಷ ಬಾಕರ್ ಅಲಿ ಜಮಾದಾರ, ಆರೀಫ್ ಅಲಿ ಲಂಗಡೆ, ಸೈನಾ ಅಜೀಂ ನಾವದಗಿ, ಆರೀಫಾ ಬೇಗಂ, ಕಬೀರಾ ಆಫಾ, ಅಣ್ಣಪ್ಪಾ ಜಮಾದಾರ, ಫಕ್ರೋದ್ದೀನ್ ಗೋಳಾ, ಹೀನಾಬಾನು ನೌಕಾಡಗಲ್ಲಿ, ಹಸೀನಾ ಬಾನು, ಮಮತಾಜ್ ಬೇಗಂ, ಫರಜಾನಾ, ರಾಜೇಶ್ವರಿ, ಬಿಸ್ಮೀಲ್ಲಾ ಮತ್ತಿತರರು ಹಾಜರಿದ್ದರು.