ಕಲಬುರಗಿ | ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ : ಅರುಟಗಿ
ಕಲಬುರಗಿ : ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಸಮಿತಿ ಆಳಂದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಅರುಟಗಿ ಅವರು ಹೇಳಿದ್ದಾರೆ.
ಆಳಂದ ಪಟ್ಟಣದ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾನತೆ, ಸೌಹಾರ್ದತೆ ಮತ್ತು ನ್ಯಾಯದ ಗುರಿಯನ್ನು ಸಾಧಿಸಲು ಮಾನವ ಹಕ್ಕುಗಳ ಸಂರಕ್ಷಣೆ ಅನಿವಾರ್ಯವಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರು ಸಮಾನರಾಗಿ ಕಾಣಬೇಕಾಗಿದೆ. ಅಸಮಾನತೆ ಮತ್ತು ಶೋಷಣೆಯನ್ನು ತಡೆಯುವ ಮೂಲಕವೇ ನಾವು ಸಮಾಜದಲ್ಲಿ ಸಮತೋಲನವನ್ನು ತಂದುಕೊಳ್ಳಬಹುದು. ಎಂದರು.
ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸುಮನ ಚಿತ್ತರಗಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ್ ರಾಠೋಡ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ. ಸಿಂದೆ, ಮಹಾದೇವ ಹತ್ತಿ, ಬಿ.ಜಿ.ಬೀಳಗಿ, ದೇವಾನಂದ ಹೋದಲೂರ, ಸಂಗಣ್ಣ ಕೆರಮಗಿ, ತೈಯ್ಯುಬ್ ಅಲಿ ಸೇರಿದಂತೆ ಪ್ರಮುಖ ನ್ಯಾಯವಾದಿಗಳು, ನ್ಯಾಯಾಂಗ ಸಿಬ್ಬಂದಿಗಳು, ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.