ಕಲಬುರಗಿ | ಜ್ಞಾನ ಮನುಷ್ಯನ ಆತ್ಮವನ್ನು ಪರಿಶುದ್ಧಗೊಳಿಸುತ್ತದೆ : ಮಲ್ಲಿನಾಥ ರಾವೂರ

Update: 2024-12-10 15:41 GMT

ಕಲಬುರಗಿ : ಪುಸ್ತಕ ಓದಿನಿಂದ ಮನುಷ್ಯನ ನಡವಳಿಕೆ ಉತ್ತಮಗೊಂಡು, ಆತನ ಆತ್ಮ ಪರಿಶುದ್ಧಗೊಳ್ಳುತ್ತದೆ ಎಂದು ಶಹಾಬಾದ್ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಹೇಳಿದರು.

ಅವರು ಶಹಾಬಾದ್ ತಾಲ್ಲೂಕಿನ ಮರತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವನ ತೆಗನೂರ ಗ್ರಾಮದ ಬಸ್ ನಿಲ್ದಾಣದಲ್ಲಿ ʼಪುಸ್ತಕ ಗೂಡುʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಯಾಣಿಕರಿಗೆ, ಊರಿನ ಗ್ರಾಮಸ್ಥರಿಗೆ ಉಪಯುಕ್ತವಾಗಲಿ ಎನ್ನುವ ನಿಟ್ಟಿನಲ್ಲಿ ʼಪುಸ್ತಕ ಗೂಡುʼ ಸ್ಥಾಪಿಸುವ ಕಾರ್ಯ ಮಹತ್ವಾಕಾಂಕ್ಷೆಯಾದದ್ದು, ಜ್ಞಾನ ಮನುಷ್ಯನ ಅರಿವನ್ನು ಜಾಗೃತಗೊಳಿಸುತ್ತದೆ. ಈ ಹಿಂದೆ ಮಹನೀಯರೆಲ್ಲಾರೂ ಪುಸ್ತಕ ಪ್ರೇಮಿಗಳಾಗಿದ್ದರು. ಆದ್ದರಿಂದ ಅವರು ದೇಶದ ಚರಿತ್ರೆಯ ಪುಟಗಳಲ್ಲಿದ್ದಾರೆ. ಪುಸ್ತಕ ಓದಿನಿಂದ ಮನುಷ್ಯನ ನಡವಳಿಕೆ ಉತ್ತಮಗೊಂಡು, ಆತನ ಆತ್ಮ ಪರಿಶುದ್ಧಗೊಳ್ಳುತ್ತದೆ ಎಂದರು.

ಶಹಾಬಾದ್ ತಾಲ್ಲೂಕಿನ ರಾಜೀವ್ ಗಾಂಧಿ ಪಂಚಾಯತ್ರಾಜ್ ಫೆಲೋ ರಡ್ಡೆಪ್ಪ ಮಾತನಾಡಿ, ಜನ್ಮ ದಿನಾಚರಣೆ, ವಿವಾಹ ವಾರ್ಷಿಕೋತ್ಸವದ ಆಚರಣೆ ದಿನಗಳಲ್ಲಿ ಪ್ರೀತಿಯಿಂದ ಒಂದೊoದು ಪುಸ್ತಕವನ್ನು ನಿಮ್ಮ ಹೆಸರು ಬರೆದು ಕಾಣಿಕೆಯಾಗಿ ಈ ಗೂಡಿನಲ್ಲಿಡಿ, ಆಹಾರ, ಆರೋಗ್ಯ, ಅಕ್ಷರ ಸ್ಥಳೀಯವಾಗಿ ಮನುಷ್ಯ ಇರುವಲ್ಲಿಯೇ ದೊರಕಬೇಕಾಗಿರುವ ಅತ್ಯಮೂಲ್ಯಗಳು, ಇವುಗಳಿಂದ ಯಾವೊಬ್ಬ ವ್ಯಕ್ತಿಯೂ ವಂಚಿತರಾಗಬಾರದು ಎಂದರು.

ಪುಸ್ತಕ ಗೂಡಿನ ಕಪಾಟನ್ನು ಮರತೂರ ಗ್ರಾಮ ಪಂಚಾಯತಿಗೆ ದಾನವಾಗಿ ನೀಡಿದ ಮಲ್ಲಪ್ಪ ಎಸ್ ದೊಡ್ಡಮನಿ ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ, ನೀತಿ ಆಯೋಗದ ಫೆಲೋ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಮುಖ್ಯೋಪಾಧ್ಯಾರು, ಶಿಕ್ಷಕರು, ಬಸವೇಶ್ವರ ಸಂಜೀವಿನಿ ಒಕ್ಕೂಟದ ಮಹಿಳೆಯರು, ಅರಿವು ಕೇಂದ್ರದ ಮೇಲ್ವಿಚಾರಕರು, ಸ್ಪೂರ್ತಿ ತಂಡದವರು, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ಹಾಗೂ ಊರಿನ ನಾಗರಿಕರಿದ್ದರು.

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಏಳು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಈಗಾಗಲೇ ಗ್ರಂಥಾಲಯ ಇರುವ ಕೇಂದ್ರ ಸ್ಥಾನವನ್ನು ಹೊರತುಪಡಿಸಿ ಉಳಿದ ಕಡೆ ಶಾಖೆ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ. ಅದರ ಜೊತೆಗೆ ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಗಳ ಸಹಕಾರದಿಂದ ಪುಸ್ತಕ ಗೂಡು ನಿರ್ಮಿಸಲಾಗುತ್ತದೆ.

ಮಲ್ಲಿನಾಥ ರಾವೂರ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಶಹಾಬಾದ್.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News