ಕಲಬುರಗಿ | ಅಕಾಲಿಕ ಮಳೆ, ಬಿರುಗಾಳಿಗೆ ತೊಂದರೆ ಆಗದಂತೆ ಕ್ರಮವಹಿಸಲು ಶಾಸಕ ಅಲ್ಲಂಪ್ರಭು ಪಾಟೀಲ್ ಸೂಚನೆ

ಕಲಬುರಗಿ : ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪಟ್ಟಣ ಸರ್ಕಲ್ ವ್ಯಾಪ್ತಿಯಲ್ಲಿ ಭಾರಿ ಹಾನಿ ಸಂಭವಿಸಿದೆ. ವಿದ್ಯುತ್ ಕಂಬಗಳು ಬಿದ್ದು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ಬಾಳೆ ಧರೆಗುರುಳಿವೆ. ತಕ್ಷಣ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಶಾಸಕರಾದ ಅಲ್ಲಂಪ್ರಭು ಪಾಟೀಲರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿರುವ ಶಾಸಕರು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಇದರಿಂದಾಗಿ ರೈತರಿಗೆ, ಜನರಿಗೆ ತೊಂದರೆಯಾಗಿದೆ. ತಕ್ಷಣ ಕಂಬಗಳನ್ನು ಸರಿಪಡಿಸಿ ಆಗಿರುವ ತೊಂದರೆ ಪರಿಹಾರಸುವಂತೆ ಜೆಸ್ಕಾಂ ಸೆಕ್ಷನ್ ಅಧಿಕಾರಿಗಳು, ಇಂಜಿನಿಯರ್ ಗಳಿಗೆ ಸೂಚಿಸುವಂತೆ ಎಂಡಿ ರವೀಂದ್ರ ಕರಿಲಿಂಗಣ್ಣನವರ್ ಅವರಿಗೆ ಸೂಚಿಸಿದ್ದಾರೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿಯಿಂದಾಗಿ ಮನೆಗಳ ಮೇಲೆ ಹಾಕಲಾಗಿದ್ದ ಝಿಂಕ್ ಶೀಟ್ ಗಳೇ ಹಾರಿ ಹೋಗಿವೆ. ಇದರಿಂದ ಅನೇಕ ಕುಟುಂಬಗಳು ಸೂರಿಲ್ಲದಂತಾಗಿವೆ. ಈ ಬಗ್ಗೆಯೂ ಸಮೀಕ್ಷೆ ನಡೆಸಿ ಅಂತಹ ಕುಟುಂಬಗಳಿಗೆ ಸೂಕ್ತ ನೆರವಿಗೆ ಧಾವಿಸುವಂತೆಯೂ ಕಲಬುರಗಿ ತಹಶೀಲ್ದಾರ್ ಅವರಿಗೆ ಶಾಸಕರು ಸೂಚಿಸಿದ್ದಾರೆ.