ಕಲಬುರಗಿ | ಶಾಸಕ ಬಸನಗೌಡ ಯತ್ನಾಳ್ ಕ್ಷಮೆ ಕೇಳುವಂತೆ ಆಗ್ರಹ
ಕಲಬುರಗಿ : ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಲೇ ಕ್ಷಮೆ ಕೇಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ಅವಂಟಿ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವತಿಯಿಂದ ಬೀದರ್ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಸವಣ್ಣನವರು ಹೊಳೆಗೆ ಹಾರಿ ಪ್ರಾಣ ಬಿಟ್ಟರು ಎಂಬ ಆಧಾರರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿರುವುದು ಖಂಡನಾರ್ಹವಾಗಿದೆ ಎಂದರು.
ಬಸವಣ್ಣನವರ ಬಗ್ಗೆ ಅವರು ಬಹಳ ಹಗುರವಾಗಿ ಮಾತನಾಡಿ ಅಕ್ಷಮ್ಯ ಅಪರಾಧ ವೆಸಗಿದ್ದಾರೆ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರನ್ನು ಅವಮಾನ ಮಾಡಿರುವ ಯತ್ನಾಳ್ ಅವರಿಗೆ ಇನ್ನು ಮುಂದೆ ಪಕ್ಷ ಹಾಗೂ ಸರಕಾರದ ವತಿಯಿಂದ ಲಿಂಗಾಯತ ಮೀಸಲಾತಿ ಕೋಟಾದಲ್ಲಿ ಯಾವುದೇ ಸೌಲಭ್ಯ ನೀಡಬಾರದು ಎಂದು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಕಲ್ಲಾ, ನಾಗನಗೌಡ ಮಾಲಿಪಾಟೀಲ್, ಮಹಾಂತ ಸಾಹು ಹರವಾಳ, ಹಣಮಂತರಾಯ ಕಲಶೆಟ್ಟಿ ಇತರರಿದ್ದರು.