ಕಲಬುರಗಿ | ಯುಪಿಎಸ್‌ಸಿ ಪರೀಕ್ಷೆಯಲ್ಲಿ 984ನೇ ರ‍್ಯಾಂಕ್‌ಗಳಿಸಿದ ಮೋಹನ ಪಾಟೀಲ್‌ಗೆ ಸನ್ಮಾನ

ಕಲಬುರಗಿ : ಇತ್ತೀಚೆಗೆ ಪ್ರಕಟವಾದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 984ನೇ ರ‍್ಯಾಂಕ್ ಪಡೆದ ಕಮಲಾಪೂರ ತಾಲೂಕಿನ ಡೋರ ಜಂಬಗಾ ಗ್ರಾಮದ ಮೋಹನ ಸಂಗಣ್ಣಗೌಡ ಪಾಟೀಲ್ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ರವಿವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅದ್ಧೂರಿಯಾಗಿ ಸತ್ಕರಿಸಿ ಅಭಿನಂದಿಸಲಾಯಿತು.
ನೇತೃತ್ವ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಲ್ಯಾಣ ಕರ್ನಾಟಕ ಭಾಗದ ಅಪ್ಪಟ ಗ್ರಾಮೀಣ ಪ್ರತಿಭೆ ಇಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಸರಕಾರಿ ಶಾಲೆಯಲ್ಲಿ ಓದಿ ರಾಷ್ಟ್ರ ಮಟ್ಟದ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುವ ಮೋಹನ ಪಾಟೀಲ್ ಅವರ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹರು. ಈ ಭಾಗದ ಅಭಿವೃದ್ಧಿ ಕನಸು ನನಸು ಮಾಡುವಲ್ಲಿ ಮೋಹನ ಪಾಟೀಲರು ಉತ್ತಮ ನಾಗರಿಕ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಧಕ ಮೋಹನ ಎಸ್.ಪಾಟೀಲ್, ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಯುಪಿಎಸ್‌ಸಿ ಪರೀಕ್ಷೆ ನನ್ನ ಕನಸಾಗಿತ್ತು. ಅದನ್ನು ಸತತ ಅಧ್ಯಯನ ಮತ್ತು ಪರಿಶ್ರಮದ ಮೂಲಕ ಗುರಿ ಮುಟ್ಟಲು ಸಾಧ್ಯವಾಯಿತು. ನನ್ನ ಈ ಸಾಧನೆಗೆ ಗೌರವಿಸಿ ಪ್ರೋತ್ಸಾಹಿಸಿದ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚಿರಋಣಿಯಾಗಿರುವೆ ಎಂದರು.
ಇದೇ ಸಂದರ್ಭದಲ್ಲಿ ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿ ಅವರ ತಂದೆಯವರಾದ ಸಂಗಣ್ಣಗೌಡ ಪಾಟೀಲ ರು ಕೂಡ ಮಾತನಾಡಿದರು.
ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಧರ್ಮರಾಜ ಜವಳಿ, ನಂದಿನಿ ಸನಬಾಳ ಮಾತನಾಡಿದರು. ಪ್ರಮುಖರಾದ ಹಣಮಂತಪ್ರಭು, ಬಾಬುರಾವ ಪಾಟೀಲ, ರಾಜೇಂದ್ರ ಮಾಡಬೂಳ, ರವಿಕುಮಾರ ಶಹಾಪುರಕರ್, ಶಿವಲೀಲಾ ಕಲಗುರ್ಕಿ, ಸವಿತಾ ನಾಸಿ, ರಮೇಶ ಡಿ ಬಡಿಗೇರ, ಗಣೇಶ ಚಿನ್ನಾಕಾರ, ದಿನೇಶ ಮದಕರಿ, ಮಹೇಶ ಚಿಂತನಪಳ್ಳಿ, ಮಧೂಸೂಧನ ಚಿಂತನಪಳ್ಳಿ, ಪ್ರಭವ ಪಟ್ಟಣಕರ್, ಮಲ್ಲಿನಾಥ ಸಂಗಶೆಟ್ಟಿ, ಚಂದ್ರಕಾoತ ಸೂರನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದಿದ್ದರು.
ಪ್ರತಿನಿತ್ಯ ನಮ್ಮ ಕನ್ನಡ ಭಾಷೆಯ ಬಳಕೆ ಪ್ರೋತ್ಸಾಹಿಸಬೇಕು. ಪಾಲಕರೂ ಕೂಡ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಾಗಲಿ. ಕನ್ನಡ ಕೇವಲ ಭಾಷೆಯಲ್ಲ. ನದು ನಮ್ಮ ಸ್ವಾಭಿಮಾನದ ಸಂಕೇತವೂ ಹೌದು. ನಮ್ಮ ಉಸಿರು ಕನ್ನಡವಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ನಾನು ಕೂಡ ಕನ್ನಡ ಸಾಹಿತ್ಯ ನನ್ನ ವಿದ್ಯಾಭ್ಯಾಸದಲ್ಲಿ ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದೇನೆ. ಆದ್ಧರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು.
ಮೋಹನ ಸಂಗಣ್ಣಗೌಡ ಪಾಟೀಲ, (ಯುಪಿಎಸ್‌ಸಿ ತೇರ್ಗಡೆಯಾದ ಅಭ್ಯರ್ಥಿ)