ಕಲಬುರಗಿ | ಗೋದುತಾಯಿ ಮಹಿಳಾ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರ

ಕಲಬುರಗಿ : ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಶರಣಬಸವೇಶ್ವರ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ದಯಾನಂದ ಹೊಡಲ್ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯವು ಮಂಗಳವಾರ ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಗ್ರಾಮ ಸ್ವರಾಜ ಮಹಾತ್ಮ ಗಾಂಧಿಜಿಯವರ ಕನಸ್ಸಾಗಿತ್ತು. ಗ್ರಾಮಗಳು ಅಭಿವೃದ್ಧಿಗೊಳ್ಳಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಶಿಬಿರವು ಕೇವಲ ಸ್ವಚ್ಛತೆ ಅಷ್ಟೇ ಅಲ್ಲ ಶಿಸ್ತು, ಸಂಯಮ, ಸಮಯಪ್ರಜ್ಞೆ, ರಾಷ್ಟ್ರಾಭಿಮಾನ ಮತ್ತು ಸ್ವಇಚ್ಛಾಶಕ್ತಿ , ಸೇವಾಧರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗಾಂಧಿಜಿಯವರ ಕನಸ್ಸು ಶಿಬಿರದ ಆಶಯ ಈಡೇರುತ್ತದೆ ಎಂದು ಹೇಳಿದರು.
ಚೇತನ ಮಾತನಾಡಿ, ಈ ಕಾರ್ಯಕ್ರಮದಿಂದ ಬಾಂಧವ್ಯ, ಅರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ, ಕೃಷಿ ಹೀಗೆ ಹಲವಾರು ವಿಷಯಗಳನ್ನು ಪ್ರತಿಯೊಬ್ಬ ಸ್ವಯಂ ಸೇವಕರು ತಿಳಿದುಕೊಳ್ಳಬೇಕು. ಡಿಜಿಟಲ್ ಬಳಕೆ ಹಾಗೂ ಡಿಜಿಟಲ್‌ನಲ್ಲಿ ಆಗುವ ಬದಲಾವಣೆಗಳು ಎಲ್ಲರದಲ್ಲಿಯೂ ಬೆಳೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಂಗೀತ ವಿಭಾಗದ ಮುಖ್ಯಸ್ಥರಾಗಿರುವ ಡಾ.ಸೀಮಾ ಪಾಟೀಲ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಮಿಲಿಂದಕುಮಾರ ಸುಳ್ಳದ್, ಕಲ್ಪನಾ ಡಿ.ಮಹೇಂದ್ರಕರ್ ಹಾಗೂ ಎ ಮತ್ತು ಬಿ ಘಟಕಗಳ ಶಿಬಿರಾರ್ಥಿಗಳು ಹಾಜರಿದ್ದರು.
ಜವೇರಿಯಾ ಅಂಜುಮ್ ಶೇಖ್ ನಿರೂಪಿಸಿದರು, ಗೋದಾವರಿ ಗುಂಪಿನ ಶಿಬಿರಾರ್ಥಿಗಳು ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಿಯದರ್ಶಿನಿ ವಂದಿಸಿದರು.