ಕಲಬುರಗಿ | ಶಾಸಕ ಯತ್ನಾಳ್, ಪೇಜಾವರ ಶ್ರೀ ಹೇಳಿಕೆ ಖಂಡಿಸಿ ಪ್ರತಿಭಟನೆ
ಕಲಬುರಗಿ : ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ವಿಶ್ವ ಗುರು ಬಸವಣ್ಣನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಾಪೂರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಂವಿಧಾನ ಕುರಿತು ಅವಹೇಳನಕಾರಿ ಮಾತನಾಡಿದ ಪೇಜಾವರ ಶ್ರೀಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಆಳಂದ ಪಟ್ಟಣದ ಹೊರವಲಯದ ತಾಲ್ಲೂಕು ಆಡಳಿತಸೌಧ ಮುಂದೆ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಮೇಶ ಲೋಹಾರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದರು.
ಮಹಾಸಭಾ ಜಿಲ್ಲಾ ಮುಖಂಡ ರಾಜಶೇಖರ ಯಂಕoಚಿ ಅವರು ಮಾತನಾಡಿ, ಇಡೀ ವಿಶ್ವಕ್ಕೆ ಮಹಾನ್ ನಾಯಕರಾಗಿರುವ ಬಸವಣ್ಣನವರ ಹೇಸರಿಟ್ಟುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಅವರಿಗೆ ಕಲ್ಯಾಣ ಕ್ರಾಂತಿಯ ಬಗ್ಗೆ ಅರಿವಿಲ್ಲ. ಬಸವಣ್ಣನವರ ವಿರುದ್ಧ ಹೇಳಿಕೆ ನೀಡಿರುವುದು ಖಂಡನಾರ್ಹವಾಗಿದೆ. ಇವರಿಗೆ ಅಲ್ಲಿನ ಕ್ಷೇತ್ರದ ಜನತೆಯೇ ಪಾಠಕಲಿಸಬೇಕು ಹಾಗೂ ಸರಕಾರವೂ ಸಹ ಇಂತಹ ಹೇಳಿಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಹಾಸಭಾ ತಾಲ್ಲೂಕು ಅಧ್ಯಕ್ಷ ರಮೇಶ ಲೋಹಾರ, ಶಾಂತಿವನ ಚರ್ಚ ಫಾಧರ ಸಂತೋಷ, ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ, ನಿವೃತ್ತ ಶಿಕ್ಷಕ ಧರ್ಮಣ್ಣಾ ಪೂಜಾರಿ ಅವರು, ಯತ್ನಾಳ್ ಹಾಗೂ ಉಡಪಿಯ ಶ್ರೀಗಳ ಹೇಳಿಕೆಯನ್ನು ಖಂಡಿಸಿ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸೇನೆಯ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಜಿಡ್ಡೆ, ಎ.ಆರ್.ಬೇಗ, ರಮೇಶ ಜಗತಿ ಮತ್ತಿತರು ಪಾಲ್ಗೊಂಡಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪರ ಗ್ರೇಡ್-2 ತಹಶೀಲ್ದಾರ್ ಬಿ.ಜಿ.ಕುದರಿ ಅವರ ಮೂಲಕ ಸರಕಾರಕ್ಕೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರರು ಸರಕಾರಕ್ಕೆ ಮನವಿ ಪತ್ರ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.