ಕಲಬುರಗಿ | ಒಬಿಸಿ ನಿಗಮಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಮೋರ್ಚಾದಿಂದ ಪ್ರತಿಭಟನೆ

Update: 2024-12-22 12:56 GMT

ಕಲಬುರಗಿ : ರಾಜ್ಯದ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡುವಂತೆ ಒತ್ತಾಯಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಭಾನುವಾರ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲೆಯಲ್ಲಿ ದೇವರಾಜ ಅರಸು, ಒಕ್ಕಲಿಗ ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಅಲೆಮಾರಿ ಅರೆ ಅಲೆಮಾರಿ, ಮಡಿವಾಳ ಮಾಚಿದೇವ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮ ಹೀಗೆ 11 ನಿಗಮಗಳಿಗೆ ಸ್ವಯಂ ಉದ್ಯೋಗ, ಗಂಗಾಕಲ್ಯಾಣ, ಅರಿವು, ನೇರ ಸಾಲ ಯೋಜನೆಗಳಿಗಾಗಿ ಒಟ್ಟು 16,142 ಅರ್ಜಿಗಳು ಸಲ್ಲಿಕೆಯಾಗಿದ್ದು, 8.14 ಕೋಟಿ ರೂ. ಮಾತ್ರ ನಿಗದಿಪಡಿಸಿ 411 ಫಲಾನುಭವಿಗಳ ಆಯ್ಕೆ ಗುರಿ ನೀಡಲಾಗಿದೆ. ಇಲ್ಲಿಯವರೆಗೆ ಒಂದು ಪೈಸೆಕೂಡ ಬಿಡುಗಡೆ ಮಾಡಿಲ್ಲ. ಕಳೆದ ಬಾರಿ ಸ್ಥಾಪನೆಯಾಗಿದ್ದ ಪಿಂಜಾರ, ನದಾಫ್ ಸಮುದಾಯದ ಅಭಿವೃದ್ಧಿ ನಿಗಮಕ್ಕೂ ಅನುದಾನ ಮತ್ತು ಅಧ್ಯಕ್ಷರ ನೇಮಕಾತಿ ನಡೆದಿಲ್ಲ. ಈ ಕೂಡಲೇ ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಿಸಿ, ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

20 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕನಿಷ್ಠ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1,000 ರೂ. ಕೋಟಿ ಅನುದಾನವನ್ನು ಎಲ್ಲ ನಿಗಮ ಮಂಡಳಿಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಜೆಟ್ನಲ್ಲಿ 1,600 ಕೋಟಿ ರೂ. ಘೋಷಣೆ ಮಾಡಿ, ಕೇವಲ 57.04 ಕೋಟಿ ರೂ. ವೆಚ್ಚ ಮಾಡಿ ಅನ್ಯಾಯವೆಸಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ಈರಣ್ಣ ಹಡಪದ, ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಸದ್ದಾಂ ಹುಸೇನ್ ವಜೀರ್ ಗಾವ್, ಮೌಲಾಲಿ ನದಾಫ್, ದೇವಿಂದ್ರ ದೇಸಾಯಿ ಕಲ್ಲೂರ, ಬೀರಣ್ಣ ಕಲ್ಲೂರ, ಬಸವರಾಜ ಮದ್ರಿಕಿ, ಸಂಗಪ್ಪ ಕುಂಬಾರ ಸೇರಿದಂತೆ ಇತರರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News