ಕಲಬುರಗಿ | ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪುನರಾರಂಭಕ್ಕೆ ಅಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ, ಧರಣಿ

Update: 2024-12-16 09:22 GMT

ಕಲಬುರಗಿ: ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಕೂಡಲೇ ಕೆಲಸ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರೈತಪರ ಮತ್ತು ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ರೈತರು ಕಲಬುರಗಿ- ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದರು.

ಜೇವರ್ಗಿ ತಾಲೂಕಿನ ಯಳವಾರ ವೃತದಿಂದ ಎತ್ತಿನ ಬಂಡಿಗಳ ಮೆರವಣಿಗೆ ನಡೆಸಿದ ಧರಣಿನಿರತರು, ಚಿಗರಳಿ ಕ್ರಾಸ್ ಹತ್ತಿರ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದರು. ಕೆಕೆಆರ್ ಡಿಬಿ ಅಧ್ಯಕ್ಷರೂ ಆಗಿರುವ ಜೇವರ್ಗಿಯ ಶಾಸಕ ಡಾ. ಅಜಯ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿಯ ಸಂಚಾಲಕ, ಸಿಪಿಐ ಮುಖಂಡ ಮಹೇಶಕುಮಾರ್ ರಾಠೋಡ್, ನಾಲ್ಕು ದಶಕದ ಹೋರಾಟದ ಪ್ರತಿಫಲವಾಗಿ ಆರಂಭಗೊಂಡಿರುವ ಮಲ್ಲಾಬಾದ ಏತ ನೀರಾವರಿ ಯೋಜನೆ ಜಾರಿಯಾದರೆ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಉಪಯೋಗ ಆಗಲಿದೆ. ಆದರೆ ಇದೀಗ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

330.40 ಕೋಟಿ ರೂಪಾಯಿಗಳ ಕಾಮಗಾರಿಗೆ ಅನುಮೋದನೆ ಲಭಿಸಿದೆ. ಇದೀಗ ಅನುಮೋದನೆ ಕೊಟ್ಟು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ತೀರ್ಮಾನ ಕೈಗೊಂಡರೂ ಕಾಂಗ್ರೆಸ್ ಅಧಿಕಾರ ಬಂದ ಕೂಡಲೇ ಕೆಲಸ ಪ್ರಾರಂಭಿಸದೇ ಇಲಾಖೆಯ ಸುತ್ತೋಲೆಯಿಂದ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಿಡಿಕಾರಿದರು.

ಸರಕಾರಕ್ಕೆ ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿ ಕೆಲಸ ಕೆಲಸ ಪ್ರಾರಂಭಿಸಲು ಒತ್ತಾಯಿಸಿದ್ದೇವೆ. ಆದರೆ ಸರಕಾರದ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಪ್ರಾರಂಭಿಸದೇ ಕಾಲಹರಣ ಮಾಡಿ ಜನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಮಹಾಂತಗೌಡ ಪಾಟೀಲ ನಂದಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಳಿದ ಭಾಗದ 68 ಗ್ರಾಮಗಳ ಅಂದಾಜು ಒಂದು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಯ ಟೆಂಡರ್ ಕಾಮಗಾರಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಿವರಾಜ್ ಪಾಟೀಲ್ ರದ್ದೇವಾಡಗಿ, ಶೋಭಾ ಬಾಣಿ, ಬಾಬು ಪಟೇಲ್, ಗುರುನಾಥ ಸಾಹು ರಾಜವಾಳ, ಮಲ್ಲಣಗೌಡ ಪಾಟಿಲ ಕೆಲ್ಲೂರ, ರಾಜಾ ಪಟೇಲ ಯಾಳವಾರ, ಶಾಂತಯ್ಯ ಗುತ್ತೇದಾರ, ಮಲ್ಲಿಕಾರ್ಜುನ ಕೆಲ್ಲೂರ, ಇಬ್ರಾಹೀಂ ಪಟೇಲ್ ಯಾಳವಾರ, ಮಹಮ್ಮದ ಚೌದರಿ, ಬಿ.ಎಚ್.ಮಾಲೀಪಾಟಲ್, ದಸ್ತಗಿರ ಸಾಬ್, ಗಿರೀಶ್ ತುಂಬಗಿ, ದೇವೇಂದ್ರ ಚಿಗರಳ್ಳಿ ಸೇರಿದಂತೆ ಹಲವು ರಾಜಕೀಯ ಮುಖಂಡರು, ರೈತ ನಾಯಕರು ಸೇರಿದಂತೆ ಅನೇಕ ಧರಣಿಯಲ್ಲಿ ಉಪಸ್ಥಿತರಿದ್ದರು.

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News