ಕಲಬುರಗಿ | ಕಾಂಗ್ರೆಸ್ ಮುಖಂಡ ಸೇರಿ ಮೂವರ ಮನೆ ಮೇಲೆ ಈಡಿ ದಾಳಿ

Update: 2025-04-30 16:47 IST
ಕಲಬುರಗಿ | ಕಾಂಗ್ರೆಸ್ ಮುಖಂಡ ಸೇರಿ ಮೂವರ ಮನೆ ಮೇಲೆ ಈಡಿ ದಾಳಿ

ಭೀಮಾಶಂಕರ ಬಿಲಗುಂದಿ

  • whatsapp icon

ಕಲಬುರಗಿ : ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಆರೋಪದಡಿ ಎಚ್‌ಕೆಎ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ ಭೀಮಾಶಂಕರ ಬಿಲಗುಂದಿ ಅವರ ಮನೆ ಸೇರಿದಂತೆ ಮೂವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಎಂಆರ್‌ಎಂಸಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಂ.ಪಾಟೀಲ್‌, ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಭೀಮಾಶಂಕರ ಬಿಲಗುಂದಿ, ಡಾ.ಎಸ್.ಎಂ.ಪಾಟೀಲ, ಸುಭಾಷ ಜಗನ್ನಾಥ ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಒಂಬತ್ತು ಇನ್ನೋವಾ ಕಾರುಗಳಲ್ಲಿ ನಾಲ್ಕು ತಂಡಗಳ 30ಕ್ಕೂ ಹೆಚ್ಚು ಈಡಿ ಅಧಿಕಾರಿಗಳು ಮೂವರ ಮನೆಗಳಿಗೆ ದಾಳಿ ನಡೆಸಿದ್ದಾರೆ. ಬಳಿಕ ಅವರ ಮನೆಗಳಲ್ಲಿದ್ದ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಹೆಸರು ಬಂದಿರುವ ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ಮನೆ ಮೇಲಿನ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

ಎಂಆರ್‌ಎಂಸಿಯ 282 ಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 81.21 ಕೋಟಿ ರೂ. ಸ್ಟೈಫಂಡ್ ಹಣವನ್ನು ಭೀಮಾಶಂಕರ ಸೇರಿದಂತೆ ನಾಲ್ವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 2023ರ ಮಾ.31ರಂದು ನಗರದಲ್ಲಿರುವ 'ಸೆನ್‌' ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿದ್ಯಾರ್ಥಿಗಳ ಖಾತೆಗೆ ಸ್ಟೈಫಂಡ್ ಹಣ ಜಮೆ ಮಾಡಿಸಿ, ಬಳಿಕ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಅಕ್ರಮವಾಗಿ ಸಹಿ ಪಡೆದುಕೊಂಡಿದ್ದರು. ಆ ನಂತರ ಅಕ್ರಮವಾಗಿ ಸ್ಟೈಫಂಡ್ ಹಣವನ್ನು ವಿತ್‌ ಡ್ರಾ ಮಾಡಿಕೊಂಡ ಈ ನಾಲ್ವರು, ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಪ್ರಕರಣ ಕುರಿತಾಗಿ ಸಮರ್ಪಕ ಮಾಹಿತಿ ಪಡೆಯಲು ಈಡಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News