ಕಲಬುರಗಿ | ಕೂಲಿ ಕಾರ್ಮಿಕರ ಮಗಳು ರಾಣಿ ಮಾಳಪ್ಪಗೆ ಪಿಯುಸಿ ಪರೀಕ್ಷೆಯಲ್ಲಿ ಶೇ.98 ಅಂಕ

Update: 2025-04-09 19:49 IST
ಕಲಬುರಗಿ | ಕೂಲಿ ಕಾರ್ಮಿಕರ ಮಗಳು ರಾಣಿ ಮಾಳಪ್ಪಗೆ ಪಿಯುಸಿ ಪರೀಕ್ಷೆಯಲ್ಲಿ ಶೇ.98 ಅಂಕ
  • whatsapp icon

ಕಲಬುರಗಿ : ಬಡತನದಲ್ಲಿ ಬೆಳೆದು, ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ತನ್ನ ಛಲ ಮತ್ತು ಪರಿಶ್ರಮದ ಬಲದಿಂದ ಶಿಕ್ಷಣದಲ್ಲಿ ಅಪೂರ್ವ ಸಾಧನೆ ಮಾಡಿದ ಆಳಂದ ಪಟ್ಟಣದ ರಾಮನೋಹರ್ ಲೋಹಿಯಾ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಣಿ ಮಾಳಪ್ಪ ಹರಳಯ್ಯ ಪಿಯುಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದಿದ್ದಾರೆ.

ಕೂಲಿ ಕಾರ್ಮಿಕರ ಮಗಳಾಗಿ ಹುಟ್ಟಿದ ರಾಣಿ ಅವರು, ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ತಂದೆ ಅನಾರೋಗ್ಯದಿಂದ ನಿಧನರಾದರು. ಆಗಿನಿಂದ ತಾಯಿ ಗೋದಾವರಿ ಒಬ್ಬರೇ ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕಿದರು. ಆರ್ಥಿಕ ಸಂಕಷ್ಟಗಳ ನಡುವೆಯೂ ರಾಣಿ ತನ್ನ ಓದಿನ ಗೀಳನ್ನು ಬಿಟ್ಟುಕೊಡಲಿಲ್ಲ. ತಾಯಿಯ ಪರಿಶ್ರಮ ಮತ್ತು ತನ್ನ ಸಂಕಲ್ಪದ ಫಲವಾಗಿ ಇಂದು ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾಳೆ.

ಆಳಂದ ತಾಲೂಕಿನ ಖಜೂರಿ ವಲಯದ ಸಾಲೆಗಾಂವ್ ಗ್ರಾಮದ ಈ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಶೇ.98 ರಷ್ಟು ಅಂಕಗಳನ್ನು ಗಳಿಸುವ ಮೂಲಕ ರ‍್ಯಾಂಕ್ ಪಡೆದು, ತನ್ನ ಕನಸುಗಳಿಗೆ ಬಣ್ಣ ತುಂಬಿದ್ದಾಳೆ. ಅಲ್ಲದೆ ಈಗ ಕೆಎಎಸ್ ಪರೀಕ್ಷೆ ಮೂಲಕ ತಹಶೀಲ್ದಾರ್‌ ಆಗುವ ಬಯಕೆಯನ್ನು ಹೇಳಿಕೊಂಡಿದ್ದಾಳೆ.

ರಾಣಿಯ ಈ ಯಶಸ್ಸು ಕೇವಲ ಆಕೆಯ ಕುಟುಂಬಕ್ಕೆ ಮಾತ್ರವಲ್ಲ, ಆಳಂದ ಪಟ್ಟಣಕ್ಕೆ ಮತ್ತು ರಾಮನೋಹರ್ ಲೋಹಿಯಾ ಪಿಯು ಕಾಲೇಜಿಗೆ ಹೆಮ್ಮೆ ತಂದಿದೆ. ಆಕೆಯ ಶಿಕ್ಷಕರು ಮತ್ತು ಸಹಪಾಠಿಗಳು ರಾಣಿಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಣಿಯ ಶ್ರಮ, ಏಕಾಗ್ರತೆ ಮತ್ತು ಗುರಿಯತ್ತ ತುಡಿತವನ್ನು ಶಿಕ್ಷಕರು ಶ್ಲಾಘಿಸಿದ್ದಾರೆ. "ರಾಣಿ ತನ್ನ ಗುರಿಯನ್ನು ಸಾಧಿಸಲು ದಿನರಾತ್ರಿ ಶ್ರಮಿಸಿದ್ದಾಳೆ. ಆಕೆಯ ಈ ಯಶಸ್ಸು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ," ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.

ಕಾಲೇಜಿನ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಬಿ.ಆರ್.ಪಾಟೀಲ್ ಅವರು ರಾಣಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. "ರಾಣಿಯ ಈ ಯಶಸ್ಸು ಬಡತನದಲ್ಲಿ ಬೆಳೆದವರಿಗೆ ದೊಡ್ಡ ಪ್ರೇರಣೆ. ಆಕೆಯ ಪರಿಶ್ರಮ ಮತ್ತು ಛಲವನ್ನು ನೋಡಿ ನಮಗೆಲ್ಲರಿಗೂ ಹೆಮ್ಮೆ ಎನಿಸುತ್ತಿದೆ. ಆಕೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.

ರಾಣಿಯ ತಾಯಿ ಗೋದಾವರಿ, ಮಗಳ ಈ ಸಾಧನೆಯನ್ನು ಕಂಡು ಭಾವುಕರಾಗಿದ್ದಾರೆ. "ನನ್ನ ಮಗಳು ಓದಲು ಕಷ್ಟಪಟ್ಟಿದ್ದಾಳೆ. ಆಕೆಗೆ ಈ ಯಶಸ್ಸು ಸಿಕ್ಕಿರುವುದು ನನ್ನ ಜೀವನದ ದೊಡ್ಡ ಆನಂದದ ಕ್ಷಣ ಎಂದು ಅವರು ಹೇಳಿದರು.

ನಾನು ಉತ್ತಮ ಶಿಕ್ಷಣ ಪಡೆದು, ಕೆಎಎಸ್ ಪರೀಕ್ಷೆ ಬರೆದು ತಹಶೀಲ್ದಾರ್‌ ಆಗಿ ತಾಯಿಗೆ ಒಳ್ಳೆಯ ಜೀವನ ಕೊಡಿಸಬೇಕೆಂದು ಆಸೆ ಇದೆ ಎಂದು ರಾಣಿ ತನ್ನ ಮನದಾಸೆಯನ್ನು ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News