ಕಲಬುರಗಿ| ಅತ್ಯಾಚಾರ ಪ್ರಕರಣದ ಆರೋಪಿಗೆ 35 ವರ್ಷ ಜೈಲು ಶಿಕ್ಷೆ

Update: 2024-11-05 23:08 IST
ಕಲಬುರಗಿ| ಅತ್ಯಾಚಾರ ಪ್ರಕರಣದ ಆರೋಪಿಗೆ 35 ವರ್ಷ ಜೈಲು ಶಿಕ್ಷೆ
  • whatsapp icon

ಕಲಬುರಗಿ : ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗೆ 35 ವರ್ಷ ಜೈಲು ಶಿಕ್ಷೆ ಹಾಗೂ 39 ಸಾವಿರ ದಂಡ ವಿಧಿಸಿ ಎಂದು ಆದೇಶ ಹೊರಡಿಸಿದೆ.

ಚಿಂಚೋಳಿ ತಾಲ್ಲೂಕಿನ ರಾಯಕೋಡ ಗ್ರಾಮದ ಮಹೇಶ ಮಲ್ಲಪ್ಪ ತಳವಾರ (26) ಎಂಬಾತನೇ ಶಿಕ್ಷೆಗೆ ಒಳಗಾದ ವ್ಯಕ್ತಿ. 2019ರ ಡಿಸೆಂಬರ್ 15ರಂದು ಚಿಂಚೋಳಿ ತಾಲೂಕಿನ ಗ್ರಾಮವೊಂದರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೇಸಿನಲ್ಲಿ ಈತನ ವಿರುದ್ಧ ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಗಾಗಲೇ ಮದುವೆಯಾಗಿದ್ದ ಮಹೇಶನು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಬಾಲಕಿಯೊಂದಿಗೆ ತಾನಿರುವ ಚಿತ್ರಗಳನ್ನು ಮಹೇಶ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಬಾಲಕಿಗೆ ಪ್ರೇಮಪತ್ರಗಳನ್ನೂ ಬರೆದಿದ್ದ ಎಂದು ಪೋಷಕರು ಮುಧೋಳ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮುಧೋಳ ಸಿಪಿಐಗಳಾದ ಜಗದೀಶ ಕೆ.ಜಿ. ಹಾಗೂ ಸಂದೀಪ್ ಸಿಂಗ್ ಪಿ. ಮುರುಗೋಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪೋಕ್ಸೋ ಕಾಯ್ದೆಯಡಿ ಅಪರಾಧಿಗೆ 35 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಎಂದು ಆದೇಶ ಪ್ರಕಟಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News