ಕಲಬುರಗಿ | ಆಳಂದ ಪಟ್ಟಣದ ರಸ್ತೆ ಅಗಲೀಕರಣ
ಕಲಬುರಗಿ : ಆಳಂದ ಪಟ್ಟಣದ ಮುಖ್ಯ ರಸ್ತೆ ಮಧ್ಯ ಭಾಗದಿಂದ ಎಡ, ಬಲ ಭಾಗದ ತಲಾ 20 ಅಡಿ ಸೇರಿ ಒಟ್ಟು 40 ಅಡಿ ಅಗಲದ ರಸ್ತೆ ಅಗಲೀಕರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಇದಕ್ಕೂ ಮುನ್ನ ರಸ್ತೆ ಬದಿಯಲ್ಲಿನ ಅನಧಿಕೃತ ಹಾಗೂ ಅಧಿಕೃತ ಕಟ್ಟಡಗಳ ಕುರಿತು ದಾಖಲೆ ಆಧರಿಸಿ ಆರಂಭಿಸಿದ ಸರ್ವೇ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಬಾಕಿ ಉಳಿದ ಇನ್ನಷ್ಟು ದಾಖಲೆ ಕ್ರೂಢಿಕರಿಸಿದ ಬಳಿಕ ಡಿ.13ರ ಒಳಗೆ ಜಿಲ್ಲಾಧಿಕಾರಿಗಳಿಗೆ ದಾಖಲೆ ವರದಿ ಸಲ್ಲಿಕೆ ಸಾಧ್ಯತೆ ಇದೆ ಎನ್ನಲಾಗಿದೆ.
ಪಟ್ಟಣದ ಪುರಸಭೆಯಿಂದ ಮುಖ್ಯರಸ್ತೆಯ ಮಾರ್ಗವಾಗಿ ದರ್ಗಾಚೌಕ್ ವರೆಗೆ ಉದ್ದವಿರುವ 1.4 ಕಿ.ಮೀ ರಸ್ತೆ ಅಗಲೀಕರಣದ ಕುರಿತಾದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಇದೀಗ ಸರಕಾರ ಮುಂದಾಗಿದೆ. ಇದರಲ್ಲಿ ಎಡಭಾಗಗಕ್ಕೆ 297 ಮತ್ತು ಬಲಭಾಗಕ್ಕೆ 183 ಹಳೆಯ ಹೊಸ ಕಟ್ಟಡಗಳು ಸೇರಿ 480 ಅಧಿಕೃತ, ಅನಧಿಕೃತ ಕಟ್ಟಡ ಮತ್ತು ನಿವೇಶನಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.
ಸದರಿ ರಸ್ತೆಗೆ ಶೇ.40ರಷ್ಟು ಅನಧಿಕೃತ ಕಟ್ಟಡಗಳ ಚಾಚಿಕೊಂಡಿವೆ ಎನ್ನಲಾಗಿದೆ. ಅಲ್ಲದೆ, ರಸ್ತೆಯ ಬದಿಯ 27 ಮಂದಿ ಆಸ್ತಿಗೆ ಸಂಬoಧಿತರು ಪರಿಹಾರ ನೀಡಿ ತೆರವುಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಈಗಾಗಲೇ ಹೈಕೋರ್ಟ್ ಮೊರೆ ಹೋಗಿದ್ದರಿಂದ ಸಂಬoಧಿತರಿಗೆ ನೋಟಿಸ್ ಕೊಟ್ಟು ದಾಖಲೆಗಳನ್ನು ಪರಿಶೀಲಿಸುವಂತೆ ಕೋರ್ಟ್ ಪುರಸಭೆಗೆ ಸೂಚಿಸಿದೆ.
ಇದರಿಂದಾಗಿ ಪುರಸಭೆಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ನ್ಯಾಯಾಲಯಕ್ಕೆ ಈ ಆಸ್ತಿಗಳ ಕುರಿತು ದಾಖಲೆ ಪರಿಶೀಲನೆ ವರದಿ ನೀಡಿ ಮುಂದಿನ ಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳತೊಡಗಿದೆ.
ಹಳೆಯ ಕಾಲದ ಈ ರಸ್ತೆಯನ್ನು ಈಗ ಅಗಲೀಕರಣ ಮಾಡಬೇಕೆಂಬ ಜನರ ಬೇಡಿಕೆಗೆ ಎದುರಾಗುವ ಕಾನೂನು ತೊಡಕುಗಳನ್ನು ನಿವಾರಿಸಲು ಪುರಸಭೆ ಹರಸಾಹಸ ಪಡುತ್ತಿದ್ದು, ಈ ರಸ್ತೆ ಅಗಲೀಕರಣವಾದರೆ ಬದಿಯಲ್ಲಿ ಹೊಸ ಕಟ್ಟಡಗಳ ನಿರ್ಮಾರ್ಣ ಅಂಗಡಿ ಮುಗ್ಗಂಟುಗಳ ವ್ಯಾಪಾರ ವಹಿವಾಟು ವೃದ್ಧಿ ಸೇರಿದಂತೆ ಸುಗಮ ಸಂಚಾರಕ್ಕೆ ಅನುಕೂಲದ ಉದ್ದೇಶವನ್ನು ಈಡೇರಿಸುವುದಕ್ಕಾಗಿಯೇ ಸರಕಾರ 11 ಕೋಟಿ ರೂ. ಮೀಸಲಿಟ್ಟು ಬಿಡುಗಡೆಗೊಳಿಸಿದೆ.
ಅಗಲೀಕರಣ ಕಾರ್ಯಕ್ಕೆ ಮುಂದಾಗುವ ಮುನ್ನ ರಸ್ತೆ ವ್ಯಾಪ್ತಿಗೆ ಬರುವ ಕಟ್ಟಡ, ನಿವೇಶನ ಆಸ್ತಿಗೆ ಸಂಬoಧಿತರು ಪರಿಹಾರ ನೀಡಿ ತೆರವು ಕಾರ್ಯ ನಡೆಯಲಿ ಎಂದು ವಾದಿಸತೊಡಗಿದ್ದು, ಇನ್ನೂ ಶೇ.40ರಷ್ಟು ಅನಧಿಕೃತ ಕಟ್ಟಗಳ ರಸ್ತೆಗೆ ಚಾಚಿಕೊಂಡಿದ್ದು, ತೆರುವಿಗೆ ಬುಲ್ಡೊಜರ್ ಬರುವಿಕೆಯನ್ನೇ ಕಾಯುತ್ತಿದೆ.
ಡಿ.13ರಂದು ಸ್ಪಷ್ಟವರದಿ :
ಡಿ.13ಕ್ಕೆ ಜಿಲ್ಲಾಧಿಕಾರಿಗಳಿಗೆ ಆಳಂದ ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ರಸ್ತೆ ಬದಿಯ ಆಸ್ತಿಯ ಸ್ವರೂಪದ ಬಗ್ಗೆ ಅನಧಿಕೃತ ಅಥವಾ ಅಧಿಕೃತ ಸ್ವಸ್ಥತೆಯ ದಾಖಲೆಗಳ ವರದಿಯನ್ನು ನೀಡಲಿದ್ದು, ಈ ಬಳಿಕ ಸಹಾಯಕ ಆಯುಕ್ತರ ಅಧ್ಯಕ್ಷತೆಯ ರಸ್ತೆ ಅಗಲೀಕರಣ ಸಮಿತಿ ಸಭೆ ಕರೆದು ಚರ್ಚೆಯ ಬಳಿಕ ರಸ್ತೆ ಬದಿಯ ಆಸ್ತಿಗೆ ಸಂಬoಧಿತರಿಗೆ ನೋಟಿಸ್ ಜಾರಿಗೊಳ್ಳಲಿದೆ.
ಆಯುಕ್ತರ ಅಧ್ಯಕ್ಷತೆ ಸಭೆ :
ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ (ಐಎಎಸ್), ಅವರು ಪಟ್ಟಣದ ಪುರಸಭೆಯಲ್ಲಿ ಶನಿವಾರ ಪರಿಶೀಲನೆ ನಡೆಸಿದರು. ರಸ್ತೆ ಅಗಲೀಕರಣ ಕುರಿತಾದ ದಾಖಲೆಗಳನ್ನು ಬಹುಹೊತ್ತು ಪರಿಶೀಲಿಸಿ ಹಾಜರಿದ್ದ ಅಧಿಕಾರಿಗಳಿಗೆ ಮುಂದಿನ ಕ್ರಮದ ಬಗ್ಗೆ ಸಲಹೆ ಸೂಚನೆಗಳು ನೀಡಿ ಅಂತಿಮ ವರದಿ ಜಿಲ್ಲಾಧಿಕಾರಿಗಳಿಗೆ ನೀಡಲು ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಅವರು ಆಯುಕ್ತರಿಗೆ ಮಾಹಿತಿ ನೀಡಿದರು. ಕಂದಾಯ ನಿರೀಕ್ಷಕ ಶಫಿ ರೋತೆ, ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ, ಎಸ್ಐ ರಾಘವೇಂದ್ರ ಮತ್ತಿತರರು ಇದ್ದರು.