ಕಲಲಬುರಗಿ | ನಿರಾಶ್ರಿತರಿಗೆ ಆಶ್ರಯ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ವಾತ್ಸಲ್ಯ ಮನೆ

ಕಲಬುರಗಿ : ಆಳಂದ ತಾಲೂಕಿನ ನಿಂಬರ್ಗ ವಲಯದ ಮಾಡಿಯಾಳ ಕಾರ್ಯಕ್ಷೇತ್ರದ ನಿರಾಶ್ರಿತ ಮಾಶಾಸನ ಪಲಾನುಭವಿ ಶರೀಫ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದ ವಾತ್ಸಲ್ಯ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರಿಸಲಾಯಿತು.
ಈ ಮನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಸ್ ಗೌಡ ಪೊಲೀಸ್ ಪಾಟೀಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, "ವಾತ್ಸಲ್ಯ ಯೋಜನೆಯು ಸಮಾಜದ ನಿರಾಶ್ರಿತರು, ವೃದ್ಧರು, ದೀರ್ಘಕಾಲೀನ ರೋಗಿಗಳು ಮತ್ತು ಬಡವರಿಗಾಗಿ ಪ್ರಾರಂಭಿಸಿದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಜನರು ಒಂದು ಸುರಕ್ಷಿತ ಮತ್ತು ಆರಾಮದಾಯಕ ವಾಸಸ್ಥಾನ ಪಡೆಯುತ್ತಾರೆ. ಸಮಾಜದ ಎಲ್ಲ ವರ್ಗಗಳ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ" ಎಂದರು. ಅವರು ವಾತ್ಸಲ್ಯ ಯೋಜನೆಯ ಮಹತ್ವ ಹಾಗೂ ಅದರ ಪ್ರಯೋಜನಗಳನ್ನು ವಿವರಿಸಿದರು.
ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಅವರು ಮಾತನಾಡಿ, "ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ವಿಶೇಷವಾಗಿ ನಿರಾಶ್ರಿತರ ಪುನರ್ವಸತಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡುವುದು ಸಮಾಜದ ದಯಾ ಪರಂಪರೆಯ ಪರಿಪೂರ್ಣ ಉದಾಹರಣೆ. ಈ ಮನೆಗಳನ್ನು ಪಡೆದುಕೊಂಡವರು ಸಮುದಾಯದ ಭಾಗವಾಗಿ ಉತ್ತಮ ಜೀವನ ನಡೆಸಲು ಸಾಧ್ಯವಾಗಬೇಕು. ಈ ಸಂಬಂಧ ಅವರ ಸಂಪೂರ್ಣ ಪುನರ್ವಸತಿಯೊಂದಿಗೆ ಜೀವನೋತ್ಪಾದಕ ಕೌಶಲ್ಯ ತರಬೇತಿಗಳೂ ಒದಗಿಸಲಾಗುತ್ತವೆ" ಎಂದು ವಿವರಿಸಿದರು.
ನಿವೃತ್ತ ಶಿಕ್ಷಕ ಗ್ರಾಮದ ನಿಂಗಣ್ಣ ಕಂಬಾರ್ ಮಾತನಾಡಿ, "ಈ ಯೋಜನೆಯಿಂದ ಬಡಜನರಿಗೆ ಆಶ್ರಯ ದೊರೆಯುತ್ತಿರುವುದು ಸಮಾಜಕ್ಕೆ ದಾರಿ ತೋರಿಸುವಂತಹ ಕೆಲಸ. ಇಂತಹ ಜನಪರ ಯೋಜನೆಗಳು ಇನ್ನಷ್ಟು ಗ್ರಾಮಗಳಲ್ಲಿ ವಿಸ್ತರಿಸಬೇಕು" ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭು ಸರಸಂಬಿ, ಚನ್ನಮಲ್ಲೇಶ್ವರ ಮಠದ ಉಪಾಧ್ಯಕ್ಷ ಸೂರ್ಯಕಾಂತ್ ರಾಮ್ ಜಿ., ಗ್ರಾಮ ಪಂಚಾಯತಿ ಸದಸ್ಯ ಸೈಪನ್ ಸಾಬ್ ಜಮಾದಾರ್, ಒಕ್ಕೂಟ ಅಧ್ಯಕ್ಷರು, ವಲಯದ ಮೇಲ್ವಿಚಾರಕ ಬಸವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ಹಿರೇಕುಡಿ, ಸೇವಾ ಪ್ರತಿನಿಧಿಗಳು ರಾಜೇಶ್ವರಿ, ಲಕ್ಷ್ಮಿ, ವಿಜಯಲಕ್ಷ್ಮಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.