ಕಲಬುರಗಿ | ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಿ : ಡಾ.ಅಪ್ಪಾರಾವ ದೇವಿ ಮುತ್ಯಾ

ಕಲಬುರಗಿ : ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿಪೀಠದ ಪೀಠಾಧಿಪತಿಗಳಾದ ಪೂಜ್ಯ ಡಾ.ಅಪ್ಪಾರಾವ ದೇವಿ ಮುತ್ಯಾ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಗೌರವ ಉಪಸ್ಥಿತಿ ವಹಿಸಿ ಆಶೀವರ್ಚನ ನೀಡಿದರು.
ಪಠ್ಯಪುಸ್ತಕಗಳು ಭೂತಕಾಲದ ಇತಿಹಾಸವನ್ನು ತಿಳಿಸಿದರೆ ಇಂತಹ ಶಿಬಿರಗಳು ವರ್ತಮಾನ, ಭವಿಷ್ಯಕಾಲದಲ್ಲಿ ಹೇಗಿರಬೇಕೆಂದು ತಿಳಿಸುತ್ತವೆ. ನಿರಂತರ ಶ್ರಮ, ಕೆಲಸದಲ್ಲಿ ಶ್ರದ್ಧೆ, ಕರ್ತವ್ಯ ನಿಷ್ಠೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಕಾಯಕ, ದಾಸೋಹ ಮತ್ತು ಅರಿವನ್ನು ತಿಳಿಸಿಕೊಡುತ್ತದೆ. ಭಾತೃತ್ವ ಭಾವನೆ ಬೆಳೆಸುತ್ತದೆ. ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ ಕನಸು ನನಸಾಗಬೇಕಾದರೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮಗಳು ಬೆಳೆವಣಿಗೆಯಾಗಬೇಕು, ಅದಕ್ಕೆ ಇಂತಹ ಶಿಬಿರಗಳು ನಡೆಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ಶ್ರೀನಿವಾಸ ಸರಡಗಿಯ ಮುಖಂಡರಾದ ಶರಣು ಗೋನಾಯಕ, ಅರುಣಕುಮಾರ ಗೋನಾಯಕ ಮಾತನಾಡಿದರು.
ವೇದಿಕೆ ಮೇಲೆ ವೆಂಕಟೇಶ ದೊರೆ ಇದ್ದರು. ಎನ್‌ಎಸ್‌ಎಸ್ ಸಂಯೋಜಕರಾದ ಡಾ.ಮಿಲಿಂದಕುಮಾರ ಸುಳ್ಳದ್ ಪ್ರಾಸ್ತಾವಿಕ ಮಾತನಾಡಿದರು, ಕಲ್ಪನಾ ಡಿ.ಮಹೇಂದ್ರಕರ್ ವರದಿ ವಾಚನ ಮಾಡಿದರು. ಕು.ದಾನೇಶ್ವರಿ ಸ್ವಾಗತಿಸಿದರು, ಕು.ಜವೇರಿಯ ಅಂಜುಮ್‌ಶೇಕ್ ಮತ್ತು ಕು.ಅಂಬಿಕಾ ಮೈನಾಳ ನಿರೂಪಿಸಿದರೆ, ಕು.ನೀಲಾಂಬಿಕಾ ಪಾಟೀಲ ವಂದಿಸಿದರು. ಪ್ರಿಯಾಂಕ ಹೂಗಾರ, ನಿಖಿತಾ ಮೂಲಗೆ ಮತ್ತು ವರ್ಷ ಆರ್.ಜೆ. ಅನಿಸಿಕೆ ಹೇಳಿದರು.