ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ : 644 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Update: 2025-04-16 21:18 IST
ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ : 644 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
  • whatsapp icon

ಕಲಬುರಗಿ : ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ವಿನಾಕಾರಣ ವಿರೋಧ ಪಕ್ಷಗಳು ಟೀಕೆ ಮಾಡುವ ಬದಲು ಕಲಬುರಗಿಗೆ ಬಂದು ನೋಡಿದರೆ ಅಭಿವೃದ್ಧಿ ಕಾರ್ಯ ಕಣ್ಣಿಗೆ ಕಾಣುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ 216.53 ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ ಮತ್ತು 6.20 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕ ಉದ್ಘಾಟನೆ ಹಾಗೂ 421.31 ಕೋಟಿ ರೂ. ಮೊತ್ತದ ವಿವಿಧ 8 ಅಭಿವೃಧ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜೊತೆಗೆ ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳನ್ನು ಜಿಲ್ಲೆಗಳಲ್ಲಿ ಒಂದೊಂದಾಗಿ ಜಾರಿಗೆ ತರುತ್ತಿದ್ದೇವೆ. 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಇಂದು ಕಲಬುರಗಿಯಲ್ಲಿ 644 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದು ಅಭಿವೃಧ್ಧಿ ಅಲ್ಲವೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ. ಎಲ್ಲಾ ವರ್ಗದ ಜನರಿಗೆ, ಅವಕಾಶಗಳಿಂದ ವಂಚಿತರಾದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಇರಲೇಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಬಡತನದಿಂದ ಬೆಂದ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಘೋಷಣೆ ಮಾಡಿದ್ದು, ಒಂದೊಂದೇ ಕಲಬುರಗಿ ಜಿಲ್ಲೆಗಳಲ್ಲಿ ಇವೆಲ್ಲವೂ ನೆರವೇರುತ್ತಿವೆ. ಒಟ್ಟಾರೆಯಾಗಿ ಕಲಬುರಗಿಯನ್ನು ಮೆಡಿಕಲ್ ಹಬ್ ಮಾಡುವ ನಿಟ್ಟಿನಲ್ಲಿ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರ ಕಾರ್ಯಕ್ಕೆ ಸಿ.ಎಂ.ಮೆಚ್ಚುಗೆ ವ್ಯಕ್ತಪಡಿಸಿದರು.

3 ಕಡೆ ಮೆಡಿಕಲ್ ಕಾಲೇಜು :

ಪ್ರಸ್ತುತ ರಾಜ್ಯದ 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಇಲ್ಲ. ಇದರಲ್ಲಿ ಇತ್ತೀಚೆಗೆ ಮಂಡಿಸಿದ ಆಯವ್ಯಯದಲ್ಲಿ ಬಾಗಲಕೋಟೆ, ಮಂಗಳೂರು, ಕೋಲಾರದಲ್ಲಿ ಈ ವರ್ಷ ಮೆಡಿಕಲ್ ಕಾಲೇಜು ಸ್ಥಾಪನೆಗೆ ಘೋಷಣೆ ಮಾಡಲಾಗಿದ್ದು, ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

ರಾಜ್ಯಕ್ಕೆ ಏಮ್ಸ್ ಕೊಡಿ :

ರಾಜ್ಯಸಭೆಯ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂಬ ಕೂಗಿಗೆ ಕೇಂದ್ರ ಸರ್ಕಾರದ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ಭಾಗದಲ್ಲಿ ಏಮ್ಸ್ ಸ್ಥಾಪನೆಯಾದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಜೊತೆಗೆ ಪಕ್ಕದ ಮಹರಾಷ್ಟ್ರದ ಸೋಲಾಪೂರ ಭಾಗದ ಜನರಿಗೂ ಅನುಕೂಲವಾಗಲಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ :

ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ನನ್ನ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಬಜೆಟ್‌ನಲ್ಲಿ ಸೇರಿಸಲಾಗಿತ್ತು. ಯಡಿಯೂರಪ್ಪನವರ ಸರ್ಕಾರ ಅದನ್ನು ವಾಪಸ್ ಪಡೆದಿತ್ತು. ಸಿದ್ದರಾಮಯ್ಯ ಅವರು ಮತ್ತೇ ಬಜೆಟ್‌ನಲ್ಲಿ ಸೇರಿಸಿದ್ದು, ಇನ್ನು ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನಮ್ಮ ಪ್ರದೇಶದಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ, ಎಲ್ಲವನ್ನು ಕಲ್ಯಾಣ ಕರ್ನಾಟಕ ಹಾಗೂ ಕಲಬುರಗಿಗೆ ತೆಗೆದುಕೊಂಡು ಬರುತ್ತಿದ್ದೀರಿ ಎಂದು ನಾನು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ರೇಗಿಸುತ್ತಿದ್ದೆ. ಅವರು ಈ ವರ್ಷ ನಿಮ್ಮ ಪ್ರದೇಶದಲ್ಲೂ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ” ಎಂದರು.

“ಮಾತು ಕೊಡುವುದು ಮುಖ್ಯವಲ್ಲ. ಯಾವುದೇ ಸಂದರ್ಭ ಬಂದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ನಮ್ಮ ಪ್ರಣಾಳಿಕೆಯಲ್ಲಿ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕ್ರಮ ರೂಪಿಸುತ್ತಿದ್ದು ಈ ಕ್ಷೇತ್ರಗಳನ್ನು ಅಭಿವೃದ್ಧಿಯ ಪಥಕ್ಕೆ ಸೇರಿಸಿಕೊಳ್ಳಲಾಗಿದೆ. ಆ ಮೂಲಕ ಈ ಭಾಗದ ಐದಾರು ಜಿಲ್ಲೆಗಳ ಜನರ ಋಣ ತೀರಿಸುವ ಕೆಲಸ ಮಾಡಲಾಗುತ್ತಿದೆ. ಈ ಭಾಗದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂದರು.

ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಇಂದಿಲ್ಲಿ 8 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಒಂದೆರಡು ವರ್ಷದಲ್ಲಿ ಇವೆಲ್ಲವು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.

ಶಂಕುಸ್ಥಾಪನೆಯಾದ ಕಾಮಗಾರಿಗಳ ವಿವರ :

ಜಿಮ್ಸ್ ಅಸ್ಪತ್ರೆ ಆವರಣದಲ್ಲಿ 200 ಹಾಸಿಗೆಯ 92 ಕೋಟಿ ರೂ. ವೆಚ್ಚದ ತಾಯಿ ಮತ್ತು ಮಕ್ಕಳ ಅಸ್ಪತ್ರೆ ನಿರ್ಮಾಣ, 92 ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಘಟಕದ ಕಟ್ಟಡ ಕಾಮಗಾರಿ, 76 ಕೋಟಿ ರೂ. ವೆಚ್ಚದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ 210 ಹಾಸಿಗೆಯ ವಿಸ್ತರಣಾ ಕಟ್ಟಡ, 50.61 ಕೋಟಿ ರೂ. ವೆಚ್ಚದಲ್ಲಿ ಗುಲಬರ್ಗಾ ವಿ.ವಿ.ಯಲ್ಲಿ ಮಲ್ಟಿ ಸ್ಕಿಲ್ ಡೆವಲೆಪ್‌ಮೆಂಟ್ ಸೆಂಟರ್ ಸ್ಥಾಪನೆ ಮತ್ತು ಕೌಶಲ್ಯ ತರಬೇತಿ ಪ್ರಯೋಗಾಲಯ, 49.50 ಕೋಟಿ ರೂ. ವೆಚ್ಚದಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಸ್ಥಾಪನೆ ಕಾಮಗಾರಿ, 28 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಭವನ ನಿರ್ಮಾಣ, 20 ಕೋಟಿ ರೂ. ವೆಚ್ಚದ ಸರ್ಕಾರಿ ಐ.ಟಿ.ಐ(ಪುರುಷ) ಉನ್ನತ್ತಿಕರಣ ಕಾಮಗಾರಿ, 13.20 ಕೋಟಿ ರೂ. ವೆಚ್ಚದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಆಡಿಟೋರಿಯಂ ಸಭಾಂಗಣ ನಿರ್ಮಾಣ ಸೇರಿದಂತೆ ಒಟ್ಟಾರೆ 421.31 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಇಂದಿಲ್ಲಿ ಅಡಿಗಲ್ಲು ಹಾಕಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಅಫಜಲಪುರ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ವೈ. ಪಾಟೀಲ, ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್‌, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ. ಅಜಯ ಸಿಂಗ್, ಕಲಬುರಗಿ ಸಂಸದ ರಾಧಾಕೃಷ್ಣ ಆರ್.ದೊಡ್ಡಮನಿ, ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಕನೀಝ್‌ ಫಾತೀಮಾ, ವಿಧಾನ ಪರಿಷತ್ ಶಾಸಕರುಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ತಿಮ್ಮಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಅಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್., ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್., ಕಿದ್ವಾಯಿ ಆಸ್ಪತ್ರೆಯ ಪ್ರಭಾರ ಅಧಿಕಾರಿ ಡಾ.ಗುರುರಾಜ ದೇಶಪಾಂಡೆ ಸೇರಿದಂತೆ ಅನೇಕರು ಇದ್ದರು. ಡಿ.ಎಚ್.ಓ. ಡಾ.ಶರಣಬಸಪ್ಪ ಕ್ಯಾತನಾಳ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News