ಕಲಬುರಗಿ | ವೇತನ ಕೊಡದ ಶಿಕ್ಷಣ ಇಲಾಖೆಯ ವಿರುದ್ಧ ಶಿಕ್ಷಕನ ಏಕಾಂಗಿ ಪ್ರತಿಭಟನೆ

ಕಲಬುರಗಿ : ಹೆಂಡತಿ ಆಸ್ಪತ್ರೆಯಲ್ಲಿ ಇದ್ದಾಳೆ, ಆಸ್ಪತ್ರೆಗೆ ಬಿಲ್ ಕಟ್ಟಬೇಕಾಗಿದೆ, ನನ್ನ ಬಳಿ ಹಣ ಇಲ್ಲ, ನನಗೆ ಬರಬೇಕಾದ ಸಂಬಳವನ್ನು ಏಕೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಕ ಜಗದೀಶ್ ಅವಟಿ ಎಂಬಾತರು ಅಫಜಲಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.
ಅಫಜಲಪುರ ತಾಲೂಕಿನ ಇಂಗಳಗಿ(ಕೆ) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಜಗದೀಶ್ ಅವಟಿಗೆ ಕಳೆದ ಫೆಬ್ರವರಿ ತಿಂಗಳಿನ ಸಂಬಳ ನೀಡದೆ ಮ್ಯಾನೇಜರ್ ಲಚ್ಚಪ್ಪ ಹಾಗೂ ಸುಪ್ರಡೆಂಟ್ ಹೂವಣ್ಣ ಅಂಕಲಗಿ ಇಬ್ಬರೂ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಏಕಾಂಗಿಯಾಗಿ ಪ್ರತಿಭಟನೆಗೆ ಇಳಿದಿದ್ದಾರೆ.
ಫೆ.10ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು 2024-25ನೇ ಆರ್ಥಿಕ ವರ್ಷದ ಆದಾಯ ತೆರಿಗೆ ಮಾಹಿತಿಯನ್ನು ನಿಯಮಾನುಸಾರ ಫೆ.20ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಆದೇಶ ಹೊರಡಿಸಿದಾಗ ತಕ್ಷಣವೇ ಮಾಹಿತಿ ನೀಡಿದರೂ ಸುಳ್ಳು ಕಾರಣಗಳನ್ನು ನೀಡಿ ದಿನ ಕಳೆಯುತ್ತಿದ್ದಾರೆ. ಸರ್ವ ಶಿಕ್ಷಣ ಅಭಿಯಾನದಲ್ಲಿ ಆಯ್ಕೆಗೊಂಡಿರುವ ತಾಲೂಕಿನ ಸುಮಾರು 84 ಶಿಕ್ಷಕರಿಗೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅನಾರೋಗ್ಯ ಕಾರಣದಿಂದಾಗಿ ನನ್ನ ಹೆಂಡತಿ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದುಡ್ಡು ಕಟ್ಟಬೇಕಾಗಿದೆ ಎಂದು ತಿಳಿದರೂ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ಗಾಡಿ ಅವರು ಶಿಕ್ಷಕನ ಮನವೊಲಿಸಿ, ಇನ್ನೂಳಿದ ಎಲ್ಲಾ ಶಿಕ್ಷಕರ ಸಂಬಳವನ್ನು ಪಾವತಿಸಲಾಗುವುದು ಎಂದು ಭರವಸೆ ನೀಡಿದಾಗ ಶಿಕ್ಷಕ ಜಗದೀಶ್ ಅವಟಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.