ಕಲಬುರಗಿ | ನಾಳೆ 'ನೆನಪಿನ ಅಲೆಯಲ್ಲಿ' ಹೈಕು ಸಂಕಲನ ಜನಾರ್ಪಣೆ ಸಮಾರಂಭ : ತೇಗಲತಿಪ್ಪಿ
ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳೂ ಆದ ಸಾಹಿತಿ ಧರ್ಮಣ್ಣ ಎಚ್.ಧನ್ನಿ ಅವರ ವಿರಚಿತ 'ನೆನಪಿನ ಅಲೆಯಲ್ಲಿ' ಎಂಬ ಹೈಕು ಸಂಕಲನ ಜನಾರ್ಪಣೆ ಸಮಾರಂಭವನ್ನು ನಾಳೆ ಡಿ.14 (ಶನಿವಾರ)ದಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಕಾವ್ಯದ ಉತ್ಸಾಹಿಗಳಾದ ಲೇಖಕ ಧನ್ನಿ ಅವರು ಕಾವ್ಯದ ಹೊಸ ಪ್ರಕಾರಕ್ಕೆ ಕೈ ಹಾಕಿದ್ದಾರೆ. ಯಾವುದೇ ಕಾವ್ಯ ಪ್ರಕಾರವನ್ನು ಇನ್ನೊಂದು ಭಾಷೆಗೆ ತರುವುದು ದೊಡ್ಡ ಸಾಹಸವೇ ಸರಿ. ಒಟ್ಟಾರೆಯಾಗಿ ಸಂವೇದನಾಶೀಲ ಬರಹಗಳ ಜತೆಗೆ ಧನ್ನಿ ಅವರು ಹೈಕು ಲೋಕವನ್ನು ಪ್ರವೇಶಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ನಟ-ನಿರ್ಮಾಪಕ, ಕಾದಂಬರಿಕಾರ ಡಾ.ಮದನ್ ಪಟೇಲ್ ಕೃತಿ ಜನಾರ್ಪಣೆಗೊಳಿಸಲಿದ್ದು, ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅವರು ಕೃತಿ ಪರಿಚಯ ಮಾಡಲಿದ್ದಾರೆ. ಸಾಹಿತ್ಯ ಪ್ರೇರಕಿ ವಾಣಿಶ್ರೀ ಸಗರಕರ್, ಲೇಖಕ ಧರ್ಮಣ್ಣ ಎಚ್ ಧನ್ನಿ ಅವರು ಉಪಸ್ಥಿತರಿರುವರು, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.