ಕಲಬುರಗಿ | ಭೀಕರ ರಸ್ತೆ ಅಪಘಾತ: 2 ವರ್ಷದ ಮಗು ಸಹಿತ ಮೂವರು ಮೃತ್ಯು
Update: 2025-04-24 11:21 IST

ಕಲಬುರಗಿ: ರಸ್ತೆಯಲ್ಲಿ ಏಕಾಏಕಿ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಕಾರೊಂದು ಅಪಘಾತಕ್ಕೀಡಾಗಿ ಎರಡು ವರ್ಷದ ಮಗು ಸಹಿತ ಮೂವರು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಅಫ್ಝಲ್ ಪುರ ತಾಲೂಕಿನ ಗೊಬ್ಬುರು(ಕೆ) ಗ್ರಾಮದ ಬಳಿ ನಡೆದಿದೆ.
ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಗಳಾದ ಆಯಿಶ(70), ಅಜ್ಮೇರಾ (30) ಮತ್ತು ಜೈನಬ್ (2) ಮೃತಪಟ್ಟವರು ಎಂದು ತಿಳಿದುಬಂದಿದೆ.
ಇವರು ಮಿಲ್ಲತ್ ನಗರದಿಂದ ಮಹಾರಾಷ್ಟ್ರ ಗಡಿಯಲ್ಲಿರೋ ಹೈದ್ರಾ ದರ್ಗಾಕ್ಕೆ ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಟವೇರಾ ವಾಹನದಲ್ಲಿ ತೆರಳುತ್ತಿದ್ದರು. ಇವರಿದ್ದ ವಾಹನ ಗೊಬ್ಬುರು(ಕೆ) ಗ್ರಾಮದ ಬಳಿ ತಲುಪಿದಾಗ ರಸ್ತೆಯಲ್ಲಿ ನಾಯಿಯೊಂದು ಏಕಾಏಕಿ ಕಾರಿಗೆ ಅಡ್ಡ ಬಂತೆನ್ನಲಾಗಿದೆ. ಅದನ್ನು ರಕ್ಷಿಸುವ ಯತ್ನದಲ್ಲಿ ಕಾರು ಉರುಳಿಬಿದ್ದು ಈ ಅಪಘಾತ ಸಂಭವಿಸಿದೆ.
ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.