ಕಲಬುರಗಿ | ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ : ಡಿವೈಎಫ್‌ಐ ಖಂಡನೆ

ಕಲಬುರಗಿ: ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ದುರ್ಮರಣಕ್ಕೆ ಒಳಗಾದ ಘಟನೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ ಹಲವರು ಬಲಿಯಾದದ್ದು ತಿಳಿದುಬಂದಿದೆ. "ಅಮಾಯಕರ ಮೇಲೆ ನಡೆದಿರುವ ಈ ಪೈಶಾಚಿಕ ದಾಳಿ ನಿಜಕ್ಕೂ ಆಘಾತಕಾರಿಯಾಗಿದೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು," ಎಂದು ಡಿವೈಎಫ್‌ಐ ಅಧ್ಯಕ್ಷ ಲವಿತ್ರ ವಸ್ತ್ರದ ಆಗ್ರಹಿಸಿದ್ದಾರೆ.
ಸಂಘಟನೆ ಭದ್ರತಾ ವೈಫಲ್ಯಕ್ಕೆ ಕೇಂದ್ರ ಸರ್ಕಾರವನ್ನು ಹೊಣೆವಿಟ್ಟು, ಜಮ್ಮು ಕಾಶ್ಮೀರದ ಜನತೆಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರವನ್ನು ಹುಡುಕುವಂತೆ ಒತ್ತಾಯಿಸಿದ್ದಾರೆ. "ಶಾಂತಿ, ಸೌಹಾರ್ದತೆ ಹಾಗೂ ರಾಷ್ಟ್ರದ ಒಗ್ಗಟ್ಟಿಗೆ ಧಕ್ಕೆ ಉಂಟುಮಾಡುವ ಈ ದಾಳಿಯನ್ನು ದೇಶದ ಜನತೆ ಒಂದಾಗಿ ಖಂಡಿಸಬೇಕು," ಎಂಬುದು ಡಿವೈಎಫ್‌ಐ ನಿಲುವಾಗಿದೆ ಎಂದರು.
ಮೃತರ ಕುಟುಂಬಗಳಿಗೆ ಡಿವೈಎಫ್‌ಐ ಸಂತಾಪ ಸೂಚಿಸಿದ್ದು, ಈ ರೀತಿಯ ದಾಳಿಗಳು ದೇಶದಲ್ಲಿ ಶಾಂತಿ ಸ್ಥಾಪಿಸಲು ಅಗತ್ಯವಾದ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸಂಘಟನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಪ್ರಮೋದ ಎನ್.ಪಾಂಚಾಳ, ಸಲ್ಮಾನ್ ಖಾನ್, ಗಿಡ್ಡಮ್ಮ, ಶಾಂತಕುಮಾರ ಯಾಳಗಿ ಇದ್ದರು.