ಕಲಬುರಗಿ | ಕಳ್ಳತನ, ದರೋಡೆ ಪ್ರಕರಣ : 9 ಆರೋಪಿಗಳ ಬಂಧನ ; ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು

ಕಲಬುರಗಿ : ಜಿಲ್ಲಾ ವ್ಯಾಪ್ತಿಯ ಚಿತ್ತಾಪೂರ, ಮಾಡಬೂಳ, ಯಡ್ರಾಮಿ ಹಾಗೂ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಡೆದಿದ್ದ ಮನೆ ಕಳ್ಳತನ, ಜಾನುವಾರು ಕಳ್ಳತನ, ಬೈಕ್ ಕಳ್ಳತನ ದರೋಡೆ ಪ್ರಕರಣಗಳಿಗ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ 9 ಮಂದಿ ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಸ್ವತ್ತನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.
ನಗರದ ಪೊಲೀಸ್ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಚರಣೆಯನ್ನು ಶ್ಲಾಘಿಸಿ, ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ ಎಂದರು.
ಚಿತ್ತಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಒಂದರ ಕುರಿತು ಪ್ರಕರಣ ದಾಖಲಿಸಿಕೊಂಡು ಚಿತ್ತಾಪೂರ ತಾಲ್ಲೂಕಿನ ದಂಡಗುಂಡ ಗ್ರಾಮದ ನಿವಾಸಿ ನಿಂಗಪ್ಪ ಚೌಡಪ್ಪ ಬಡಿಗೇರ ಎಂಬಾತನನ್ನು ಬಂಧಿಸಿ, ಆತ ಈವರೆಗೆ ಕಳ್ಳತನ ಮಾಡಿದ್ದ 3 ಲಕ್ಷದ 6 ಸಾವಿರ ರೂ. ಮೌಲ್ಯದ 11 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾಡಬೂಳ ಪೊಲೀಸ್ ಠಾಣೆಯಲ್ಲಿ ಜಾನುವಾರು ಕಳ್ಳತನ ಬಗ್ಗೆ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿ, ಶಹಾಬಾದ್ ಸಮೀಪದ ಮುಗಟಾ ಗ್ರಾಮದ ಹತ್ತಿರ ಅಖ್ಲಾಕ್ ಮುಹಮ್ಮದ್ ರಫೀಕ್, ಮಹಮ್ಮದ್ ಮುಷ್ತಾಕ್ ಮತ್ತು ಶಕೀಲ್ ಅಹ್ಮದ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 1 ಲಕ್ಷ 90 ಸಾವಿರ ರೂ. ಮೌಲ್ಯದ ಜಾನುವಾರುಗಳ ಜೊತೆಗೆ ಒಂದು ಟಂಟಂ ವಾಹನ ಮತ್ತು ಒಂದು ಆಟೋ ರಿಕ್ಷಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯಡ್ರಾಮಿಯ ಕುಸ್ತಿ ಕಾಲೋನಿಯ ನಿವಾಸಿ ಗಂಗಾಧರ ರಮೇಶ್ ಕೊರವರ ಎಂಬಾತನನ್ನು ಬಂಧಿಸಿದ್ದು, ಆತನಿಂದ 1 ಲಕ್ಷ 25 ಸಾವಿರ ರೂ. ಮೌಲ್ಯದ ಆಭರಣ ಮತ್ತು 5 ಸಾವಿರ ರೂ. ನಗದು ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅಲ್ಲದೆ, ಜೇವರ್ಗಿ ಠಾಣೆಯ ವ್ಯಾಪ್ತಿಯಲ್ಲಿ ಜನರನ್ನು ಹೆದರಿಸಿ ಹಣ ದೋಚಿಕೊಂಡು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ಭವಾನಿ ಕುಮಾರ್, ಸಂತೋಷ್ ಕುಮಾರ್, ಮಹೇಶ್ ಶರಣಬಸಪ್ಪ ಮತ್ತು ಸಂಜು ಕುಮಾರ್ ಮಡಿವಾಳ ಎಂದು ಗುರುತಿಸಲಾಗಿದೆ. ಅವರಿಂದ 30,000 ರೂ. ನಗದು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿಎಸ್ಪಿ ಶಂಕರ್ ಗೌಡ ಪಾಟೀಲ್, ಲೋಕೇಶ್ವರಪ್ಪ, ಸಿಪಿಐ ಗಳಾದ ರಾಜೇಸಾಬ್ ನದಾಫ್, ಚಂದ್ರಶೇಖರ್ ತಿಗಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.


