ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಮತದಾನ ಆರಂಭ

Update: 2024-06-03 04:22 GMT

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಸೋಮವಾರ ಬೆಳಿಗ್ಗೆಯಿಂದ ಮತದಾನ ಆರಂಭಗೊಂಡಿದ್ದು, ಶಹಾಬಾದ ಮತಗಟ್ಟೆ ಸಂ.16ರಲ್ಲಿ ಪದವೀಧರ ಮತದಾರರು ಮತ ಚಲಾಯಿಸಿದರು. 

ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ‌ ನೀಡಲು ಅವಕಾಶ ಹಿನ್ನೆಲೆಯಲ್ಲಿ ಮತದಾನದ ಸರಿಯಾದ ಕ್ರಮ, ಮತ ಮೌಲ್ಯ ಮತ್ತು ಅಪಮೌಲ್ಯದ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸುವ ಪೋಸ್ಟರ್ ಮತಗಟ್ಟೆ ಹೊರಗೆ ಅಳವಡಿಸಿದೆ.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೂ ಮತದಾನ ನಡೆಯುತ್ತಿದ್ದು, ಕ್ಷೇತ್ರದಾದ್ಯಂತ 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದೆ. ಕಲಬುರ್ಗಿ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ 160 ಮುಖ್ಯ ಮತ್ತು 35 ಹೆಚ್ಚುವರಿ ಸೇರಿ ಒಟ್ಟು 195 ಮತಗಟ್ಟೆ ಸ್ಥಾಪಿಸಿಲಾಗಿದೆ. ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪಿ.ಓ., ಮೈಕ್ರೋ ವೀಕ್ಷಕರು ಒಬ್ಬರು, ಓರ್ವ ಗ್ರೂಪ್ ‘ಡಿ’ ಸಿಬ್ಬಂದಿ ಸೇರಿ ಒಟ್ಟು 6 ಜನ ಸಿಬ್ಬಂದಿ ಇರಲಿದ್ದು, ಸೂಕ್ತ ಪೊಲೀಸ್ ಭದ್ರತೆ ಸಹ ಒದಗಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಖಾತ್ರಿಪಡಿಸಿಕೊಳ್ಳಲಾಗಿದೆ ಎಂದರು.

ಮತದಾನಕ್ಕೆ ಪರ್ಯಾಯ ದಾಖಲೆಗಳಿದ್ದರೆ ಸಾಕು 

ಚುನಾವಣಾ ಗುರುತಿನ ಚೀಟಿ ಇಲ್ಲದ ಸಂದರ್ಭದಲ್ಲಿ ಮತದಾರರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ರಾಜ್ಯ-ಕೇಂದ್ರ ಸರ್ಕಾರ ಮತ್ತು ನಿಗಮ-ಮಂಡಳಿ ಹಾಗೂ ಸಾರ್ವಜನಿಕ ಉದ್ದಿಮೆಗಳು ಉದ್ಯೋಗಿಗಳಿಗೆ ವಿತರಿಸಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ವಿತರಿಸಿದ ಸೇವಾ ಕಾರ್ಡ್, ವಿಶ್ವವಿದ್ಯಾಲಯದಿಂದ ನೀಡಲಾದ ಪದವಿ-ಡಿಪ್ಲೋಮಾ ಪ್ರಮಾಣ ಪತ್ರ, ಭಾರತ ಸರ್ಕಾರದಿಂದ ನೀಡಲಾದ ಯು.ಐ.ಡಿ. ಕಾರ್ಡ್ ತೋರಿಸಿ ಮತ ಚಲಾಯಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News