ನಮ್ಮ ಪ್ರತಿಭಟನೆ ಹತ್ತಿಕ್ಕಲು ನಮ್ಮವರಿಂದಲೇ ಷಡ್ಯಂತ್ರ : ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಯತ್ನಾಳ್ ಅಸಮಾಧಾನ
ಕಲಬುರಗಿ : ʼದೇಶದ ಆಸ್ತಿಯನ್ನು ಉಳಿಸಲು ಹೋರಾಟಕ್ಕೆ ಇಳಿದಿದ್ದೇಯೇ ವಿನಃ ನಾವು ಯಾವುದೇ ಸಿಎಂ ಆಗಲು ಇಲ್ಲಿ ಬಂದಿಲ್ಲʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ʼವಕ್ಫ್ ಹಠಾವೋ, ದೇಶ ಬಚಾವೋʼ ಎಂಬ ಘೋಷ ವಾಕ್ಯದೊಂದಿಗೆ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, "ನಮ್ಮ ಪ್ರತಿಭಟನೆ ಹತ್ತಿಕ್ಕಲು ನಮ್ಮವರಿಂದಲೇ ಷಡ್ಯಂತ್ರ ನಡೆಯುತ್ತಿದೆ, ಹಾಗಾಗಿ ಬಿಜೆಪಿ ಕಾರ್ಯಕರ್ತರು ಬಂದಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ನಾವಿಲ್ಲಿ ಸಿಎಂ ಅಥವಾ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಬಂದಿಲ್ಲ. ವಕ್ಫ್ ವಿರುದ್ಧ ಹೋರಾಟ ನಡೆಸಲು ಆಗಮಿಸಿದ್ದೇವೆ. ಬಿಎಸ್‌ವೈ, ವಿಜಯೇಂದ್ರ ಏನಾದರೂ ಅಂದುಕೊಳ್ಳಲಿ, ಪತ್ರಕರ್ತರು ಏನಾದರೂ ಬರೆಯಲಿ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಳಬರನ್ನು ಬಿಟ್ಟು ಇದೀಗ ಹೊಸ ಬಿಜೆಪಿ ಪಕ್ಷ ಕಟ್ಟೋಣ, ಮೂಲು ಬಿಜೆಪಿ ಕಾರ್ಯಕರ್ತರ ಜೊತೆಗೆ ನಾವಿದ್ದೇವೆ" ಎಂದರು.
ʼಬಿಜೆಪಿಯ ಕೆಲ ಶಾಸಕರು ಇದ್ದಾರೆ, ಬೆಳಗ್ಗೆ ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾರೆ. ರಾತ್ರಿ ನೋಡಿದರೆ ಈಶ್ವರ್ ಖಂಡ್ರೆ, ಖರ್ಗೆ ಅವರ ಮನೆಗಳಿಗೆ ಹೋಗಿ ಬಿಡುತ್ತಾರೆʼ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಎನ್.ಆರ್.ಸಂತೋಷ್ ಸೇರಿದಂತೆ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಯತ್ನಾಳ್ ಬಣದ ಪ್ರತಿಭಟನೆಯಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕುರ ಬಿಟ್ಟರೆ, ಉಳಿದ ಯಾವುದೇ ಬಿಜೆಪಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿದು ಬಂದಿದೆ.