ಕಲಬುರಗಿ | ಜಿಲ್ಲಾ ಪಂಚಾಯತ್ ಸಿಇಓ ಅವರಿಂದ ಸೇಡಂ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ

ಕಲಬುರಗಿ: ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಂಗಳವಾರ (ಮಾ.18 ರಂದು) ಸೇಡಂ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೆರಳು (ಟೆಂಟ್) ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಅವರು ಮೊದಲು ಸೇಡಂ ಕುರಕುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಮೃತ ಸರೋವರ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದರು. ಈ ಸ್ಥಳದಲ್ಲಿ 290 ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಈ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ 209 ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಬಗ್ಗೆ ಮಾಹಿತಿ ಪಡೆದರು. ಈ ಶಿಬಿರದಲ್ಲಿ 18 ಕೂಲಿ ಕಾರ್ಮಿಕರಿಗೆ ರಕ್ತದೋತ್ತಡ, 17 ಕೂಲಿ ಕಾರ್ಮಿಕರಿಗೆ ಸಕ್ಕರೆ ಕಾಯಿಲೆ ಹಾಗೂ 3 ಅನೀಮಿಯಾ ಇರುವುದು ಕಂಡು ಬಂದಿದ್ದು, ಅಲ್ಲೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಕೂಲಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯೋಜನೆ ಕುರಿತು ಮಾಹಿತಿ ನೀಡಿದರು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಟೆಂಟ್ ವ್ಯವಸ್ಥೆ ಮಾಡಿದ್ದು ಕಂಡು ಬಂದಿದೆ ಎಂದರು.
ನಂತರ ಊಡಗಿ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ, ಗ್ರಂಥಾಲಯ ಕಾಮಗಾರಿ ಪರಿಶೀಲಿಸಿ, ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ಸಿಂಧನಮಡು ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ ಸಿಂಧನಮಡು ಗ್ರಾಮದಲ್ಲಿ ಕುಡಿಯುವ ನೀರಿನ ಅಂತರ್ ಜಲ ಕಡಿಮೆಯಾಗಿರುವ ಕುರಿತು ತೆರೆದು ಭಾವಿ ಪರಿಶೀಲಿಸಿದರು. ಬೇಸಿಗೆ ಇರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಳಖೇಡ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಎಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ, ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮ ವಹಿಸಿಸುವುದರ ಜೊತಗೆ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ನರೇಗಾ ಸೈಟ್‍ಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೆರಳಿಗಾಗಿ ಟೆಂಟ್ ವ್ಯವಸ್ಥೆ ಮಾಡಲು ಕ್ರಮ ವಹಿಸಲು ತಿಳಿಸಿದರು.
ಭೇಟಿ ಸಂದರ್ಭದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಸಹಾಯಕ ನಿರ್ದೇಶಕರು ಹಾಗೂ ತಾಂತ್ರಿಕ ಸಂಯೋಜಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾಂತ್ರಿಕ ಸಹಾಯಕರು ಕರ ವಸೂಲಿಗಾರ ಬಿಎಫಟಿ ಹಾಗೂ ಜಿಕೆಎಮ್ ರವರು ಉಪಸ್ಥಿತರಿದ್ದರು.