ಕಲಬುರಗಿ | ಕೋವಿಡ್‌ನಿಂದ ಮಂಕಾಗಿದ್ದ ರಂಗ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ : ಸಾಂಬಶಿವ ದಳವಾಯಿ

Update: 2024-11-16 16:54 GMT

ಕಲಬುರಗಿ : ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ ಕಾಣುತ್ತಿರುವುದು ಸಂತಸ ತಂದಿದೆ ಎಂದು ಹಿರಿಯ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಲಬುರಗಿ ರಂಗಾಯಣ ಇವರು ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ನಡೆದ “ರಂಗದಂಗಳದಲ್ಲಿ ಮಾತುಕತೆ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ನಾಟಕಗಳು ಕಡಿಮೆಯಾಗುತ್ತಿವೆ. ಒಂದಿಬ್ಬರು, ನಾಲ್ವರು ಸೇರಿ ನಾಟಕ ಮಾಡುತ್ತಿದ್ದಾರೆ. ಮಹಿಳಾ ಕಲಾವಿದರ ಕೊರತೆ ರಂಗಭೂಮಿ ಅನುಭವಿಸುತ್ತಿದೆ. ನಾಟಕ ರಂಗದ ಸದಭಿರುಚಿ ಬೆಳೆಸುವ ನಿಟ್ಟಿನಲ್ಲಿ ನಾವು ನಾಟಕಗಳನ್ನು ಕಟ್ಟಬೇಕಾಗಿದೆ ಎಂದರು.

ರಂಗಭೂಮಿ ಪರಂಪರೆಯಲ್ಲಿ ನಾನೊಬ್ಬನಾಗಿರುವುದಕ್ಕೆ ತೃಪ್ತಿ ಇದೆ ಎಂದ ಅವರು ನೀನಾಸಂನಲ್ಲಿ ಡಿಪ್ಲೋಮಾ ಪದವಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಹಲವಾರು ನಾಟಕ, ಸಿನಿಮಾದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದ್ದರೂ ಇದೂವರೆಗೆ ರಾಜ್ಯ ಸರಕಾರದಿಂದ ನಮ್ಮ ಕಡೆಗೆ ಯಾವ ಪ್ರಶಸ್ತಿಯೂ ವಾಲುತ್ತಿಲ್ಲ ಎಂಬ ಬೇಸರ ಮನದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಹಿರಿಯ ಸಾಹಿತಿಗಳಾದ ಎಸ್.ಎಸ್. ಹಿರೇಮಠ, ಸ್ವಾಮಿರಾವ ಕುಲಕರ್ಣಿ, ಮಹಾನಂದಾ, ಎಚ್.ಎಸ್.ಬಸವಪ್ರಭು, ನಾರಾಯಣ ಕುಲಕರ್ಣಿ, ಗಿರಿಧರ, ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸೇರಿದಂತೆ ಅನೇಕ ಸಾಹಿತಿಗಳು, ರಂಗಕರ್ಮಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News