ಕಮಲಾಪುರ | ಹಳೆಯ ವಿದ್ಯಾರ್ಥಿಗಳ ವಿಶೇಷ ಚರ್ಚಾ ಕೂಟ; ಪಾಲಕರ ಸಭೆ

ಕಲಬುರಗಿ : ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಶೇಷ ಚರ್ಚಾಕೂಟ ಹಾಗೂ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸುರೇಶ್ ಲೇಂಗಟಿ, ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ ಈಗಾಗಲೇ ಬೇಬಿ ಕೇರ್ ಸೆಂಟರ್ ಕೊಠಡಿಯನ್ನು ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಕಾಲೇಜಿನ ಏಳಿಗೆಗಾಗಿ ಶ್ರಮಿಸಿದ ಎಲ್ಲಾ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು ಗೌರವಿಸುವ ಗುರುವಂದನೆ ಕಾರ್ಯಕ್ರಮ ತಿಂಗಳಾಂತ್ಯಕ್ಕೆ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.
ಮುಂದಿನ ವರ್ಷ ನ್ಯಾಕ್ ಕಮಿಟಿಯು ಕಾಲೇಜಿಗೆ ಆಗಮಿಸಲಿದ್ದು, ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಕಾರ ನೀಡಲು ಹಳೆಯ ವಿದ್ಯಾರ್ಥಿಗಳ ಸಂಘ ಸಿದ್ಧವಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಶರಣಪ್ಪ ಮಾಳ್ಗೆ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕೋ ಆರ್ಡಿನೇಟರ್ ಡಾ.ಲಕ್ಷ್ಮಿಕಾಂತ್ ಶಿರೊಳ್ಳಿ, ಅಂಬರಾಯ ಮಡ್ಡೆ, ಬಂಗಾರಪ್ಪ ಚೌದ್ರಿ , ಕಿರಣ ಅವರು ಮಾತನಾಡಿದರು.
ಕಳೆದ ವರ್ಷ ಸ್ನಾತಕ ಪದವಿಯಲ್ಲಿ ಗುಲ್ಬರ್ಗ ವಿವಿಗೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ಕಲಖೋರ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶ್ರೀಕಾಂತ್ ಪಾಟೀಲ್, ಉಪನ್ಯಾಸಕಿ ವಿಜಯಲಕ್ಷ್ಮಿ, ಗ್ರಂಥಪಾಲಕ ಹಸನಮಿಯಾ, ಪಲ್ಲವಿ ಕಲಖೋರಾ, ಸಾಗರ್ ಬಾಳಿ, ಗುರು , ಸಿದ್ದು ಬಾಳಿ, ಪ್ರಕಾಶ, ಶಂಕರ, ಆರತಿ ದಿಪಿಕಾ, ಅಶ್ವಿನಿ, ಪೂಜಾ ಇತರರು ಇದ್ದರು.