ದೇಶವನ್ನು ʼಕ್ಯಾಶ್‍ಲೆಸ್ʼ ಬದಲಾಗಿ ʼಕಾಸ್ಟ್ ಲೆಸ್ʼ ಮಾಡಿ: ರಾಜರತ್ನ ಅಂಬೇಡ್ಕರ್

Update: 2025-04-26 20:44 IST
ದೇಶವನ್ನು ʼಕ್ಯಾಶ್‍ಲೆಸ್ʼ ಬದಲಾಗಿ ʼಕಾಸ್ಟ್ ಲೆಸ್ʼ ಮಾಡಿ: ರಾಜರತ್ನ ಅಂಬೇಡ್ಕರ್
  • whatsapp icon

ಕಲಬುರಗಿ: ಪ್ರಧಾನಿ ಮೋದಿಯವರೇ ದೇಶವನ್ನು ಕ್ಯಾಶ್‍ಲೆಶ್ (ನಗದು ರಹಿತ) ಮಾಡುವುದರಿಂದ ಪರಿಹಾರ ಸಿಗಲ್ಲ. ಕಾಸ್ಟ್ ಲೆಸ್ (ಜಾತಿ ರಹಿತ) ಮಾಡಿ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಡಾ.ಬಿ.ಆರ್. ಅಂಬೇಡ್ಕರ್ ಮರಿ ಮೊಮ್ಮಗ, ಭಾರತೀಯ ಬೌದ್ಧ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ತಿಳಿಸಿದರು.

ಶಹಾಬಾದ ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಡಾ.ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಭೀಮ ಉತ್ಸವದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದರು. ಕ್ಯಾಶ್ ಮೂಲಕವೇ ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ ಹೆಚ್ಚುತ್ತದೆ.‌ ಆದ್ದರಿಂದ ನೋಟ್ ಬ್ಯಾನ್ ಮಾಡಿದ್ದಾರೆ. ಈಗ ಮೊಬೈಲ್ ಮೂಲಕವೇ ಹಣ ವರ್ಗಾವಣೆವಾಗುತ್ತಿದೆ. ಅದರಿಂದ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ ಮುಂತಾದ ಸಮಸ್ಯೆಗಳು ಪರಿಹಾರವಾಗಿದೇಯಾ? ಇಲ್ಲ. ದೇಶದ ಅಧೋಗತಿ ಕ್ಯಾಶ್‍ಲೆಸ್‍ನಿಂದ ಆಗಿಲ್ಲ. ಬದಲಾಗಿ ಕಾಸ್ಟ್ ನಿಂದ ಆಗುತ್ತಿದೆ.ಆದ್ದರಿಂದ ಕ್ಯಾಶ್‍ಲೆಸ್ ಬದಲಾಗಿ ಕಾಸ್ಟ್ ಲೆಸ್ ಮಾಡಿದಾಗ ಈ ದೇಶ ಸಾಮ್ರಾಟ ಅಶೋಕನ ಮಹಾನ್ ದೇಶವಾಗಲಿದೆ ಎಂದರು.

ಡಾ.ಅಂಬೇಡ್ಕರ್ ಅವರು ಬರೆದ ಈ ದೇಶದ ಸಂವಿಧಾನ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿದೆ. ಇಂದಿನ ಸರ್ಕಾರಗಳು ಸಂವಿಧಾನ ಬದಲಿಸುವ ಮತ್ತು ಮನುಸ್ಮೃತಿಯನ್ನು ಮತ್ತೆ ಜಾರಿಗೆ ತರಲು ಪ್ರಯತ್ನಿಸುತ್ತಿವೆ. ಅದರ ವಿರುದ್ಧ ಹೋರಾಟ ಬಲಿಷ್ಠಗೊಳ್ಳಬೇಕು. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಬಾಬಾ ಸಾಹೇಬರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ಅಣದೂರಿನ ಬೌದ್ಧ ವಿಹಾರದ ಭಂತೆ ವರಜ್ಯೋತಿ ಬುದ್ಧ ವಂದನೆ ಸಲ್ಲಿಸಿದರು. ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಪಾಟೀಲ,ಜಯಂತ್ಯೋತ್ಸವದ ಗೌರವಾಧ್ಯಕ್ಷ ಸುರೇಶ ಮಂಗನ ಮಾತನಾಡಿದರು.

ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಳೊಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಡಾ ಅಧ್ಯಕ್ಷ ಡಾ.ಎಂ.ಎ ರಶೀದ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ನಗರಸಭೆ ಉಪಾಧ್ಯಕ್ಷೆ ಫಾತಿಮಾ ಬೇಗಂ, ಪೌರಾಯುಕ್ತ ಗುರುಲಿಂಗಪ್ಪ, ವೀರನಾಥ ಕನಕ, ಶಿವಪುತ್ರ ಕರಣಿಕ, ನಂದಿನಿ ನಟರಾಜ ಲಾಡೆ, ರಾಜಕುಮಾರ ಕಪನೂರ, ವಿಜಯಕುಮಾರ ಹಳ್ಳಿ, ಮಲ್ಲಪ್ಪ ಹೊಸಮನಿ, ನಾಗರಾಜ ಸಿಂಗೆ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರವೀಣ ರಾಜನ ಮತ್ತು ಮಲ್ಲಣ್ಣ ಮಸ್ಕಿ ನಿರೂಪಿಸಿದರು. ಭರತ ಧನ್ನಾ ಸ್ವಾಗತಿಸಿದರು. ಪುನೀತ್ ಹಳ್ಳಿ ವಂದಿಸಿದರು. ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಮತ್ತು ಪಿಐ ನಟರಾಜ ಲಾಡೆ ಧ್ವಜಾರೋಹಣ ನೆರವೇರಿಸಿದರು. ಶಂಕರ ಜಾನಾ ಮತ್ತು ಕೃಷ್ಣಪ್ಪ ಕರಣಿಕ ಹಾಗೂ ಸಂಗಡಿಗರಿಂದ ಕ್ರಾಂತಿ ಗೀತೆ ಹಾಡಿದರು. ನಂತರ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News