ಕೇಂದ್ರ ಗೃಹ ಸಚಿವ ಅಮಿತ್ ಶಾ ಪೆನ್ ಡ್ರೈವ್ ಪ್ರಕರಣದ ಡೈರೆಕ್ಟರ್ : ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣದ ಡೈರೆಕ್ಟರ್ ಗೃಹ ಸಚಿವ ಅಮಿತ್ ಶಾ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಿಜೆಪಿಯವರು ಮೈತ್ರಿ ಪಕ್ಷದ ಪ್ರಜ್ವಲ್ ರೇವಣ್ಣ ಮಾಡಿರುವುದು ತಪ್ಪು ಮತ್ತು ಖಂಡನೀಯ ಎಂದು ಇದುವರೆಗೆ ಹೇಳಿಲ್ಲ. ಬದಲಿಗೆ ವಿಡಿಯೋ ರೀಲಿಸ್ ಮಾಡಿರುವ ಬಗ್ಗೆ ಕ್ರಮಗೊಳ್ಳಬೇಕು, ಸಿಬಿಐ ತನಿಖೆ ನಡೆಸಬೇಕೆಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಈ ರೀತಿ ಒತ್ತಾಯ ಮಾಡುತ್ತಿದ್ದಾರೆ" ಎಂದು ಹೇಳಿದರು.
ಪ್ರಜ್ವಲ್ ರೇವಣ್ಣನ ಈ ಕೃತ್ಯದಿಂದ ರಾಜ್ಯದ ಮತ್ತು ಮೈತ್ರಿ ಪಕ್ಷಗಳ ಘನತೆಗೆ ಧಕ್ಕೆ ಬರುತ್ತಿದೆ ಎಂದು ಯಾವರೊಬ್ಬರು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಡಿಪ್ಲೋಮ್ಯಾಟಿಕ್ ಪಾಸ್ ಪೋರ್ಟ್ ರದ್ದು ಮಾಡಲು ಒತ್ತಡ ತರುತಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಎಸ್.ಐ.ಟಿಗೆ ತನಿಖೆ ನಡೆಸಲು ಕೆಲವು ಇತಿಮಿತಿಗಳು ಇದೆ. ಹೀಗಾಗಿ ವಿದೇಶದಿಂದ ಪ್ರಜ್ವಲ್ ನನ್ನು ಬಂಧಿಸಲು ಕೇಂದ್ರದ ಸಹಕಾರದ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನೊಂದ ಮಹಿಳೆಯರಿಗೆ ಧೈರ್ಯ, ನ್ಯಾಯ ಒದಗಿಸುವುದಕ್ಕಾಗಿ ಬಿಜೆಪಿ ನಾಯಕರು ಎಸ್.ಐ.ಟಿಗೆ ಕೇಂದ್ರ ಸರಕಾರ ಸಹಕಾರ ಒದಗಿಸಲು ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಕಾಂಗ್ರೆಸ್ ಪಕ್ಷದ ಜಗದೇವ್ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಮ್ ಖಾನ್, ಈರಣ್ಣ ಝಳಕಿ ಸೇರಿದಂತೆ ಹಲವರಿದ್ದರು.