ಸಂಪುಟ ಸಭೆ | ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಯ ಕುರಿತು ಚರ್ಚೆ : ಸಚಿವ ಪ್ರಿಯಾಂಕ್ ಖರ್ಗೆ

Update: 2024-09-09 07:24 GMT

ಕಲಬುರಗಿ : ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ, ಅಭಿವೃದ್ದಿಯ ನೀಲನಕ್ಷೆ ತಯಾರಿಸಲಾಗುವುದು" ಎಂದು ನಾಹಿತಿ ನೀಡಿದರು.

ʼನಿಪುಣ ಕರ್ನಾಟಕʼ ಯೋಜನೆ :ಕಲ್ಯಾಣ ಕರ್ನಾಟಕ ಭಾಗದದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. " ಈ ನಿಟ್ಟಿನಲ್ಲಿ ಈಗಾಗಲೇ ಕೌಶಲ್ಯಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ವತಿಯಿಂದ " ನಿಪುಣ - ಕರ್ನಾಟಕ " ಎನ್ನುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಇದ್ದು, ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ " ಎಂದು ಹೇಳಿದರು.

ಶಾಸಕರ, ಅಧಿಕಾರಗಳ ಸಭೆ :ಸಚಿವ ಸಂಪುಟ ಸಭೆ ನಡೆಸುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಗತ್ಯವಿರುವ ಯೋಜನೆಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲು ಈಗಾಗಲೇ ಸಂಬಂಧಿಸಿದ ಕ್ಷೇತ್ರಗಳ ಶಾಸಕರ ಹಾಗೂ ಅಧಿಕಾರಿಗಳ ಜೊತೆ ಎರಡು ಸುತ್ತಿನ ವಿಸಿ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು.

ಪ್ರತ್ಯೇಕ ಸಚಿವಾಲಯ :ಆರ್ಟಿಕಲ್ 371 (ಜೆ) ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಕುರಿತಂತೆ ಬೇಡಿಕೆ ಎದ್ದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆಯೂ ಕೂಡಾ ಚರ್ಚಿಸಲಾಗುವುದು.‌ ಆರ್ಟಿಕಲ್ 371 (ಜೆ) ಅಡಿಯಲ್ಲಿ ಈ ಭಾಗದಲ್ಲಿ 22,000 ಇಂಜಿನಿಯರಿಂಗ್ ಹಾಗೂ 2000 ವೈದ್ಯಕೀಯ‌ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಈ ಬಗ್ಗೆ ಟೀಕೆಗಳು ಸಹಜ. ಆದರೆ, ನಮ್ಮ‌ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದು ಹೇಳಿದರು.

ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ :

ಸಿಎಂ ಬದಲಾವಣೆ ಚರ್ಚೆ ಸಂಪುಟದಲ್ಲಿ ನಡೆದಿಲ್ಲ ಅದು ಮಾಧ್ಯಮಗಳಲ್ಲಿ ಮಾತ್ರ ನಡೆದಿದೆ.‌ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ್ ಪಾಟೀಲರು ಈ ವಿಚಾರದಲ್ಲಿ ಮಾತನಾಡಿರುವುದು ಗೊತ್ತಿದೆ. ಸಿಎಂ ಕುರ್ಚಿ ಖಾಲಿ ಇಲ್ಲ. ಯಾರೇ ಸಿಎಂ ಆದರೂ ಬೆಂಬಲವಿದೆ ಎಂದಷ್ಟೆ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರ ಅಧಿಕಾರ ದುರ್ಬಳಕೆ :

ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನುಬದ್ಧವಾಗಿ‌ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಹಾಗೂ‌ ಬಿಜೆಪಿ ಅಧ್ಯಕ್ಷರು ಈಗ ಮೌನವಾಗಿದ್ದಾರೆ. ಶಿಕ್ಷಣ ಸಂಸ್ಥೆ ನಡೆಸಲು ಅನಮತಿ ಪಡೆದುಕೊಂಡು ಈಗ ಬಿರಿಯಾನಿ ಹೊಟೇಲ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲೇ ಕ್ರಮ ಜರುಗಿಸುವ ರಾಜ್ಯಪಾಲರು ಈಗ ಏಕೆ ಕ್ರಮ ಜರುಗಿಸಿಲ್ಲ. ಹಾಗೇಯೇ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆಯೂ ಕ್ರಮವಿಲ್ಲ ಯಾಕೆ ? ಎಲ್ಲಿ ಬಿಜೆಪಿ ಪಕ್ಷ ಬಲಹೀನವಾಗಿದೆಯೋ ಅಲ್ಲಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News