ಕಲಬುರಗಿ: ಡಾ.ರಾಜಕುಮಾರ್ ರವರ ಜನ್ಮ ದಿನಾಚರಣೆ

ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಡಾ.ಡಾಜಕುಮಾರ್ ಅವರ 97ನೇ ಜನ್ಮ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ.ರಾಜ್ ಕುಮಾರ್ ಕೇವಲ ವ್ಯಕ್ತಿ, ನಟರಷ್ಟೇ ಅಲ್ಲ, ಅವರೊಬ್ಬ ನಾಡಿನ ಹೋರಾಟದ ಪ್ರತೀಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಗೋಕಾಕ್ ಚಳವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟ ಸಾರ್ವಭೌಮ ರಾಜ್ ಕುಮಾರ್ ಅವರ ಭಾಷಾಭಿಮಾನ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಿದ್ದು, ಇದುವೇ ನಮಗೆಲ್ಲ ಕನ್ನಡ ಉಳಿಸಿ ಬೆಳೆಸುವ ಶಕ್ತಿ ನೀಡಿದೆ ಎಂದ ಅವರು, ತಮ್ಮಅಭಿನಯದ ಮೂಲಕ ನಾಡಿನ ಪ್ರತಿಯೊಬ್ಬರ ಹೃದಯದಲ್ಲಿ ಡಾ.ರಾಜ್ ಕುಮಾರ್ ಅಮರರಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ಮುತ್ತುರಾಜನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಪಂಪಯ್ಯ ಮಾತನಾಡಿ, ಡಾ.ರಾಜ್ ಕುಮಾರ್ ಜೀವನದುದ್ದಕ್ಕೂ ಕನ್ನಡ ಚಿತ್ರ ಹೊರತುಪಡಿಸಿ ಬೇರೆ ಸಿನೆಮಾ ಮಾಡಿಲ್ಲ.ಇದು ಅವರ ಭಾಷಾಭಿಮಾನ ತೋರಿಸುತ್ತದೆ. ವೀರಪ್ಪನ್ ಅವರನ್ನು ಅಪಹರಣ ಮಾಡದೆ ಇದ್ದರೆ ಡಾ.ರಾಜ್ ಇನ್ನಷ್ಟು ಕಾಲ ನಮ್ಮೊಂದಿಗೆ ಇರುತ್ತಿದ್ದರು ಎಂದರು.
ಇದೇ ಸಂದರ್ಭದಲ್ಲಿ ಕಿರಣ ಪಾಟೀಲ ಮತ್ತು ಕಾವೇರಿ ಹಿರೇಮಠ ಅವರು ಡಾ. ರಾಜಕುಮಾರ್ ಅಭಿನಯದ ಚಲಿಸುವ ಮೋಡಗಳು ಚಿತ್ರದ "ಜೇನಿನ ಹೊಳೆಯೋ ಹಾಲಿನ ಮಳೆಯೋ", ಸನಾದಿ ಅಪ್ಪಣ್ಣ ಚಿತ್ರದ" ಕರೆದರು ಕೇಳದೆ ಸುಂದರನೆ", ದೇವತಾ ಮನುಷ್ಯ ಚಿತ್ರದ "ಹೃದಯದಲ್ಲಿ ಇದೇನಿದು", ಕವಿರತ್ನ ಕಾಳಿದಾಸ ಚಿತ್ರದ "ಓ. ಪ್ರಿಯತಮಾ", "ಕರುಣೆ ತೋರಯ್" ಸೇರಿದಂತೆ ಅನೇಕ ಚಿತ್ರಗೀತೆಗಳು, ವಿಶೇಷವಾಗಿ ಪುನೀತ್ ರಾಜಕುಮಾರ್ ಅಭಿನಯದ "ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನು ರಾಜಕುಮಾರ" ಹಾಡಿ ಗಾನದ ಸುಧೆ ಹರಿಸಿದರು. ಇದಲ್ಲದೆ ಅನೇಕ ಕನ್ನಡಾಭಿಮಾನಿಗಳು ರಾಜ್ ಅಭಿನಯದ ಕನ್ನಡ ಹಾಡು ಖುಷಿಪಟ್ಟರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನಪ್ಪಿದವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ.ಕೆ.ರಾಜರತ್ನ, ಡಾ.ರಾಜ್ ಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ವಿ. ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಡಾ. ರಾಜ್ಕುಮಾರ್ ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರವಿ ಮಿರಸ್ಕರ್ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ವಂದಿಸಿದರು.