ಬೆಂಗಳೂರು : ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆಯ ಮೃತದೇಹ ಪತ್ತೆ
ಬೆಂಗಳೂರು : ಇಲ್ಲಿನ ನೆಲಮಂಗಲ ತಾಲೂಕಿನ ಶ್ರೀನಿವಾಸಪುರದ ತೋಟದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆಯ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮೃತ ವಕೀಲೆಯನ್ನು ರಮ್ಯಾ(27) ಎಂದು ಗುರುತಿಸಲಾಗಿದ್ದು, ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ವಕೀಲೆ ಜತೆ ವಾಸವಿದ್ದ ಯುವಕನ ಮೃತದೇಹವೂ ಪತ್ತೆ!?:
ವಕೀಲೆ ರಮ್ಯಾ ಮೃತದೇಹ ನೆಲಮಂಗಲದ ಶ್ರೀನಿವಾಸಪುರದ ತೋಟದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಇನ್ನು ಆಕೆಯ ಜೊತೆಯಲ್ಲಿ ವಾಸವಿದ್ದ ಪುನೀತ್ ಎಂಬಾತನ ಮೃತದೇಹ ಕೆಂಪಲಿಂಗನಹಳ್ಳಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡೂ ಮೃತದೇಹಗಳ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಕೀಲೆ ರಮ್ಯಾ ಸಾವಿನ ಸುತ್ತಲೂ ಅನುಮಾನಗಳು ಹುಟ್ಟಿಕೊಂಡಿದ್ದು, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಕುಟುಂಬಸ್ಥರ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.