'ಬಿಜೆಪಿಯದ್ದು ವಕ್ಫ್ ಆಂದೋಲನ ಅಲ್ಲ, ವಿಜಯೇಂದ್ರ ಹಠಾವೋ ಆಂದೋಲನ' : ಪ್ರಿಯಾಂಕ್ ಖರ್ಗೆ
ಕಲಬುರಗಿ : 'ಬಿಜೆಪಿಗರು ಹೋರಾಟ ಮಾಡುತ್ತಿರುವುದು ವಕ್ಫ್ ಆಂದೋಲಕೋಸ್ಕರ ಅಲ್ಲ, ಅವರು ಖುದ್ಕಾ ಬಚಾವೋ, ವಿಜಯೇಂದ್ರ ಹಠಾವೋ ಆಂದೋಲನ ಮಾಡುತ್ತಿದ್ದಾರೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
'ಬಿಜೆಪಿಯವರು ರೈತರ ಪರವಾಗಿ ಹೋರಾಟ ನಡೆಸುತ್ತಿಲ್ಲ, ಕಮಲ ಚಿಹ್ನೆ ಇದ್ದಲ್ಲಿ ಅವರ ನಾಯಕರ ಫೋಟೋ ಹಾಕಬೇಕಲ್ಲವೇ ? ಅವರು ಯಾಕೆ ಹಾಕುತ್ತಿಲ್ಲ? ಅವರ ಬ್ಯಾನರ್ ನಲ್ಲಿ ಯಾವ ನಾಯಕರ ಫೋಟೋ ಇದೆ?' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಕುರಿತಾಗಿ ಪ್ರಶ್ನಿಸಿದ್ದಾರೆ.
'ಸ್ಪಷ್ಟವಾಗಿ ಅವರೇ ಹೇಳುತ್ತಿದ್ದಾರೆ, (ಬಿಎಸ್‌ವೈ, ವಿಜಯೇಂದ್ರ) ಕೈಯಲ್ಲಿ ಆಗಲ್ಲ ಅಂತ. ಏಕವಚನದಲ್ಲಿ ಅವರೇ ಹೇಳುತ್ತಿದ್ದಾರೆ, ನಾವಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಮುಂದೆ ಬಿಜೆಪಿಯಲ್ಲಿ ಮೂರಲ್ಲ, ನಾಲ್ಕು ಟೀಮ್ ಬರುತ್ತವೆ ಕಾದುನೋಡಿ' ಎಂದು ಟೀಕಿಸಿದ್ದಾರೆ.
ಸಿಎಂ ಬದಲಾವಣೆ ವರಿಷ್ಠರಿಗೆ ಬಿಟ್ಟ ವಿಚಾರ :
ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿ ಇರಲ್ಲ ಎಂಬ ಪ್ರಶ್ನೆಗೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದು, ಸಿಎಂ ಬದಲಾವಣೆಯ ಕುರಿತಾಗಿ ಒಂದೂವರೆ ವರ್ಷದ ಹಿಂದೆ ನಾಲ್ಕು ಮಂದಿ ವರಿಷ್ಠರು ಏನು ಮಾತಾಡಿದ್ದಾರೋ ಅದೇ ನಿರ್ಧಾರ ಅಂತಿಮ ತೀರ್ಮಾನವಾಗುತ್ತದೆ ಎಂದು ಹೇಳಿದ್ದಾರೆ.
ನಗರದ ಡಿ.ಎ.ಆರ್.ಪೊಲೀಸ್ ಗ್ರೌಂಡ್ ನಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಮಾತುಕತೆ ನಡೆದಿದೆ. ಇವರೆಲ್ಲರೂ ಸೇರಿ ಏನು ತೀರ್ಮಾನ ಮಾಡಿದ್ದಾರೋ, ಅದನ್ನೇ ಮಾಡುತ್ತಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಯಾವ ಮೂಲಗಳು ಹೇಳುತ್ತವೆ ನನಗೆ ಗೊತ್ತಿಲ್ಲ, ಅದೇ ಮೂಲಗಳಿಗೆ ಕೇಳಿದರೆ ಗೊತ್ತಾಗಬಹುದು ಏನೋ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಯಾಕೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ದೆಹಲಿಗೆ ಹೋಗಿರೋದು ಜಾರ್ಖಂಡ್ ಸಿಎಂ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ, ಅದರ ಜೊತೆಗೆ ಮೊನ್ನೆ ಫಲಿತಾಂಶ ಉತ್ತಮವಾಗಿ ಬಂದಿದೆ ಅದನ್ನು ಹೈಕಮಾಂಡ್ ಗೆ ತಿಳಿಸಲು ಅಲ್ಲಿಗೆ ಹೋಗಿದ್ದಾರೆ ಎಂದರು.