ಕಲಬುರಗಿ: ವಕ್ಪ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ವಕ್ಫ್ ಕಾಯ್ದೆ 2025 ಅನ್ನು ಕೂಡಲೇ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಿ.ಎ.ಎ - ಎನ್.ಆರ್.ಸಿ ತರಹ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಕ್ಷೇತ್ರದ ಶಾಸಕಿ ಹಾಗೂ ಕೆಎಸ್‌ಐಸಿ ಅಧ್ಯಕ್ಷೆ ಕನೀಝ್ ಫಾತಿಮಾ ಎಚ್ಚರಿಕೆ ನೀಡಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅವರ ಮಾರ್ಗದರ್ಶನದಲ್ಲಿ ರವಿವಾರ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ ವರೆಗೆ ಹಮ್ಮಿಕೊಂಡ ಬೃಹತ್ ರ್ಯಾಲಿ ಬಳಿಕ ಜಗತ್ ವೃತ್ತದಲ್ಲಿ ಆಯೋಜಿಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾರಿಯಾಗುತ್ತಿರುವ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಇದು ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ವಿರೋಧಿ ಕಾಯ್ದೆಯಾಗಿದೆ. ಒಂದು ವೇಳೆ ಕೇಂದ್ರ ಸರಕಾರ ಇದನ್ನು ಹಿಂಪಡೆಯದಿದ್ದರೆ ದೇಶದಾದ್ಯಂತ ದಿಲ್ಲಿಯ ಶಾಹೀನ್ ಭಾಗ್ ರೀತಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೇಳಿದರು.
ಖ್ವಾಜಾ ಬಂದಾ ನವಾಜ್ ದರ್ಗಾದ (ರ.ಹ) ಸಜ್ಜಾದಾನಶೀನ್ ಮತ್ತು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ನ ಅಧ್ಯಕ್ಷರಾದ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಬ್ ಮಾತನಾಡಿ, ವಿವಾದಿತ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯಬೇಕು. ಹಿಂಪಡೆಯುವ ಮಾತುಗಳು ಕೇಳದಿದ್ದರೆ ಈ ತರಹದ ದೊಡ್ಡ ಗಾತ್ರದ ಹೋರಾಟಗಳು ನಿತ್ಯವೂ ನಡೆಯಲಿವೆ. ಕಾಯ್ದೆ ರದ್ದತಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ರ್ಯಾಲಿಯಲ್ಲಿ ಶೈಖ್ ಶಾ ಮುಹಮ್ಮದ್ ಅಫ್ಜಲುದ್ದೀನ್ ಜುನೈದಿ ಸಾಬ್, ಫರಾಜ್ ಉಲ್ ಇಸ್ಲಾಂ, ಡಾ. ಸಯ್ಯದ್ ಮುಸ್ತಫಾ ಅಲ್ ಹುಸೈನಿ ಸಾಬ್, ಸಯ್ಯದ್ ಅಖೀಬ್ ಹುಸೈನಿ ಸಾಬ್, ನಜಾರ್ ಮೊಹಮ್ಮದ್ ಬಾಬಾ ಖಾನ್, ಮಾಜಿ ಕೆಯುಡಿಎ ಅಧ್ಯಕ್ಷರಾದ ಮೊಹಮ್ಮದ್ ಅಸ್ಗರ್ ಚುಲ್ಬುಲ್, ಶರೀಫ್ ಮಝ್ಹರಿ ಸಾಬ್, ಅಹ್ಮರ್ ಉಲ್ ಇಸ್ಲಾಂ, ಅಡ್ವೊಕೇಟ್ ವಹಾಜ್ ಬಾಬಾ, ಪ್ರಸ್ತುತ ಕೆಯುಡಿಎ ಅಧ್ಯಕ್ಷರಾದ ಮಝ್ಹರ್ ಆಲಂ ಖಾನ್, ಆರಿಫ್ ಖಾನ್, ಕೆ.ನೀಲಾ, ಮೀನಾಕ್ಷಿ ಬಾಳಿ, ಮೌಲಾ ಮುಲ್ಲಾ, ಮುಬೀನ ಅಹ್ಮದ್ ಸೇರಿದಂತೆ ಧಾರ್ಮಿಕ ಪಂಡಿತರು, ಸೂಫಿ ಮಹಾನುಭಾವರು, ಉದ್ಯಮಿಗಳು ಮತ್ತು ಸಾವಿರಾರು ಸಾಮಾನ್ಯ ನಾಗರಿಕರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ಜನ ವಕ್ಫ್ ತಿದ್ದುಪಡಿ ಕಾಯಿದೆ 2025 ರ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ನಗರೇಶ್ವರ್ ಶಾಲೆಯಿಂದ ಪ್ರಾರಂಭವಾದ ರ್ಯಾಲಿಯು ನೆಹರುಗುಂಜ್, ಕಿರಾಣಾ ಬಜಾರ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು.


