ಕಲಬುರಗಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ

Update: 2025-04-26 21:36 IST
ಕಲಬುರಗಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರತಿಭಟನೆ
  • whatsapp icon

ಕಲಬುರಗಿ: ಪಹಲ್ಗಾಮ್ ಭಯೋತ್ಪಾದಕ ದಾಳಿ, ಕಲಬುರಗಿಯಲ್ಲಿ ಪಾಕ್ ಧ್ವಜ ಅಂಟಿಸಿದ ಬಜರಂಗ ದಳದ ಕೃತ್ಯವನ್ನು ಖಂಡಿಸಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ಖರ್ಗೆ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಕಾ.ಮಹಾಂತೇಶ ಅವರು ಮಾತನಾಡಿ, ‘ಕಾಶ್ಮೀರದಲ್ಲಿ ಉಗ್ರವಾದಿಗಳು ನಡೆಸಿದ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. 28 ಮಂದಿ ಉಗ್ರವಾದಿಗಳ ದಾಳಿಯಲ್ಲಿ ಅಸುನೀಗಿದ್ದಾರೆ. ಅವರ ದುಃಖದಲ್ಲಿ ನಾವಿದ್ದೇವೆ. ಅವರಿಗೆ ಮನದಾಳ ಸಾಂತ್ವನ ಹೇಳುತ್ತೇವೆ. ಹತ್ಯೆಯಲ್ಲಿ ಮಡಿದವರು ಇತರೆ ಜಾತಿ ಧರ್ಮದ ಜನರೂ ಇರುವರು. ಆದರೆ ಈ ದುಷ್ಕೃತ್ಯವನ್ನು ಒಂದು ಸಮುದಾಯದ ತಲೆಗೆ ಮಾತ್ರ ಕಟ್ಟುವಂತಹ ಕುತಂತ್ರದಿಂದ ಕೋಮು ಧ್ರುವೀಕರಣ ಉದ್ಧೇಶ ಹೊಂದಿದೆ ಎಂದು ತಿಳಿಸಿದರು.

ಭದ್ರತಾ ಲೋಪವನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರವು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದು ತೀವ್ರ ಖಂಡನಾರ್ಹವಾಗಿದೆ. ಕಾಶ್ಮೀರದ ಜನತೆಯು ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೂ ಕೋಮುದ್ವೇಷ ಹಬ್ಬಿಸುವುದನ್ನು ಸಂಘಪರಿವಾರದ ಜನತೆ ನಿಲ್ಲಿಸಿಲ್ಲ. ಕಾಶ್ಮೀರದಲ್ಲಿ ಸಿಪಿಐಎಂ ಪಕ್ಷದ ಶಾಸಕರಾಗಿರುವ ಕಾ.ಯೂಸೂಫ್ ತಾರಿಗಾಮಿ ಅವರು ನೊಂದವರನ್ನು ಸಂತೈಸುವಲ್ಲಿ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ, ಉಗ್ರವಾದ ಭಯೋತ್ಪಾದನೆಯ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ ಪಕ್ಷ’ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮತ್ತು ಜಿಲ್ಲಾ ಕಾರ್ಯದರ್ಶಿಯಾಗಿರುವ ಕಾ. ಕೆ.ನೀಲಾ ಮಾತನಾಡಿ, ಸಿಪಿಐಎಂ ಪಕ್ಷವು ದೇಶದ ಐಕ್ಯತೆಗಾಗಿ ಶ್ರಮಿಸುತ್ತಿದೆ. ಬಜರಂಗ ದಳದವರು ಕಲಬುರಗಿಯಲ್ಲಿ ಪಾಕಿಸ್ತಾನಿ ಧ್ವಜವನ್ನು ಅಂಟಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದು ಶಾಂತವಾಗಿರುವ ಸೌಹಾರ್ದತೆಯ ನೆಲೆಯಾಗಿರುವ ಕಲಬುರಗಿಯಲ್ಲಿ ಕೋಮುದಂಗೆ ಹಚ್ಚುವ ಹುನ್ನಾರವಾಗಿದೆ. ಪೊಲೀಸರು ಆರು ಜನರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. ಈ ದುಷ್ಕೃತ್ಯ ರಚಿಸಿರುವ ಬಜರಂಗ ದಳದ ಮುಖಂಡರನ್ನು ಯಾಕೆ ಬಂಧಿಸುತ್ತಿಲ್ಲ? ಕೂಡಲೇ ಅವರನ್ನು ಬಂಧಿಸಬೇಕು ಎಂದು ನಗರ ಪೊಲೀಸರಿಗೆ ಆಗ್ರಹಿಸಿದ್ದಾರೆ.

ನೆಲಕ್ಕೆ ಅಂಟಿಸಿದ ಪಾಕ್ ಧ್ವಜವನ್ನು ಕಿತ್ತಿರುವ ಮಹಿಳೆಯರಿಬ್ಬರನ್ನು ಪಾಕ್ ಪ್ರೇಮಿಗಳು ಎಂದು ಹೇಳಲಾಗುತ್ತಿದೆ. ಪಾಕ್ ಧ್ವಜ ಅಂಟಿಸಿದ್ದು ತಾವೇ ಎಂದು ಬಜರಂಗ ದಳದವರು ಒಪ್ಪಿಕೊಂಡಿದ್ದಾರೆ ಎಂದರೆ ಅದು ಪಾಕ್ ಪ್ರೇಮದಿಂದಲೇ? ಅಂಟಿಸಿದವರು ಪಾಕ್ ಪ್ರೇಮಿಗಳಲ್ಲ ಕಿತ್ತವವರು ಪಾಕ್ ಪ್ರೇಮಿಗಳು ಹೇಗಾಗುವರು? ಸತ್ಯವನ್ನು ತಿರುಚುವ ಖಾಸಗಿ ಮಾಧ್ಯಮಗಳ ಷಡ್ಯಂತ್ರವನ್ನು ಪೋಲಿಸ್ ಇಲಾಖೆ ಬಯಲುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ನೆಲದ ಸೌಹಾರ್ದತೆ ಭ್ರಾತೃತ್ವವನ್ನು ಉಳಿಸಬೇಕು. ಬಜರಂಗದಳದವರು ಪಾಕ್ ಧ್ವಜ ಅಂಟಿಸಿರುವುದು ತೀವ್ರ ಖಂಡಿಸಬೇಕಾದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಹೋರಾಟದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಕಾ.ಸುಧಾಮ ಧನ್ನಿ, ಜಿಲ್ಲಾ ಸಮಿತಿಯ ಸದಸ್ಯರಾದ ಚಂದ್ರಮ್ಮ, ರಾಜ್ಯ ಸಮಿತಿಯ ಸದಸ್ಯರಾದ ಮೀನಾಕ್ಷಿ, ಲವಿತ್ರ, ಆಳಂದ ತಾಲ್ಲೂಕು ಕಾರ್ಯದರ್ಶಿ ಸಲ್ಮಾನ ಖಾನ್, ಸರ್ವೇಶ, ಸುಜಾತಾ, ಪ್ರಮೋದ, ಪ್ರಶಾಂತ, ಮುಂತಾದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News