ಸೇಡಂ | ಕಲುಷಿತ ನೀರು ಸೇವಿಸಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗಲಿ : ಜನತಾ ಪರಿವಾರ ಆಗ್ರಹ
ಕಲಬುರಗಿ : ಸೇಡಂ ತಾಲ್ಲೂಕಿನ ಹುಡಾ(ಬಿ) ಗ್ರಾಮದಲ್ಲಿ ಅ.28ರಂದು ಕಲುಷಿತ ನೀರು ಸೇವಿಸಿ ಬಾಲಕಿ ಮಮತಾ ಸುಭಾಷ್(5) ಮೃತಪಟ್ಟಿದ್ದು, ಆಕೆಯ ಕುಟುಂಬಕ್ಕೆ ಕೂಡಲೇ ನ್ಯಾಯ ದೊರಕಿಸಿ ಕೊಡಬೇಕು' ಎಂದು ಜನತಾ ಪರಿವಾರ ಸಂಘಟನೆಯ ಕಿಸಾನ್ ವಿಂಗ್ ಜಿಲ್ಲಾಧ್ಯಕ್ಷ ಶೇರ್ ಅಲಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಳಖೇಡನ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯಿಂದ ನದಿಗೆ ಬಿಟ್ಟಿದ್ದ ಕಲುಷಿತಗೊಂಡ ನೀರನ್ನು ಕುಡಿದ ಕಾರಣ ಹುಡಾ(ಬಿ) ಗ್ರಾಮದ 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಬಾಲಕಿ ಸೇರಿದಂತೆ ಒಬ್ಬ ವೃದ್ಧೆ ಕೂಡ ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ' ಎಂದು ಆರೋಪಿಸಿದರು.
ಈ ಕುರಿತು ಆರೋಗ್ಯ ಇಲಾಖೆಯು ಆ ಗ್ರಾಮದ ವಿವಿಧ ಮೂಲಗಳಿಂದ ಬರುವ 12 ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಐದು ಮೂಲಗಳು ಮಾನವ ಬಳಕೆಗೆ ಯೋಗ್ಯವಲ್ಲ ಎಂದು ತಿಳಿಸಿದೆ ಎಂದು ಉಲ್ಲೇಖಿಸಿದ್ದಾರೆ. ಸಿಮೆಂಟ್ ಕಂಪನಿಯಿಂದ ವಾಯುಮಾಲಿನ್ಯ, ಜಲಮಾಲಿನ್ಯ ಉಂಟಾಗಿದ್ದು, ಗ್ರಾಮಸ್ಥರೆಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಕ್ಕದ ಗ್ರಾಮಗಳಲ್ಲಿಯೂ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿರಾಜ್ ಶಾಬ್ದಿ ಮಾತನಾಡಿ, ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಮೃತ ಬಾಲಕಿಯ ಕುಟುಂಬಕ್ಕೆ 50 ಸಾವಿರ ಪರಿಹಾರ ಕೊಟ್ಟು ಕೈಬಿಟ್ಟಿದ್ದಾರೆ. ಈ ಪ್ರಕರಣವನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ಸಮಸ್ಯೆಗಳ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಇದು ಕೇವಲ ಒಂದೇ ಗ್ರಾಮದ ಸಮಸ್ಯೆಯಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಿಮೆಂಟ್ ಕಂಪನಿ ಸುತ್ತಲಿನ ಗ್ರಾಮಗಳಲ್ಲಿ ಶೀಘ್ರದಲ್ಲಿ ತನಿಖೆ ನಡೆಸಬೇಕು. ಅಲ್ಲಿನ ನಿವಾಸಿಗಳು ಆರೋಗ್ಯಯುತ ಜೀವನ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಖಾಲಿದ್ ಅಬ್ರಾರ್, ಅಜರ್ ಮುಬಾರಕ್, ಸೈಯದ್ ಮುಬಿನ್ ಉಪಸ್ಥಿತರಿದ್ದರು.