ರಾಜ್ಯ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು, ಒಂದು ವರ್ಷದ ಸಾಧನೆ ಶೂನ್ಯ : ಬೊಮ್ಮಾಯಿ

Update: 2024-05-21 11:24 GMT

ಕಲಬುರಗಿ: ರಾಜ್ಯ ಸರಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು, ಒಂದು ವರ್ಷದ ಸಾಧನೆ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ವಿಧಾನ ಪರಿಷತ್ ಚುನಾವಣಾ ಪ್ರಚಾರ ಅಂಗವಾಗಿ ಕಲಬುರಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

"ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರ ಒಂದೇ ಒಂದು ಹೊಸ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿಲ್ಲ‌. ಶಾಸಕರಿಗೆ ಅನುದಾನ ಮರೀಚಿಕೆಯಾಗಿರುವುದು, ರಾಜ್ಯದಿಂದ ಮೊದಲು ಬರ ಪರಿಹಾರ ನೀಡದೇ ಕೇಂದ್ರ ಸರಕಾರದ ಕಡೆಗೆ ಬೊಟ್ಟು ಮಾಡಿರುವುದು, ರಾಜ್ಯದಲ್ಲಿ ಹೆಚ್ಚಿದ ಕೊಲೆಗಳು, ಎಲ್ಲೇ ಮೀರಿದ ಡ್ರಗ್ಸ್ ಮಾಫಿಯಾ, ಬಾಲ ಬಿಚ್ಚಿದ ರೌಡಿಗಳು, ಇದಕ್ಕೆ ರಾಜಕೀಯ ಕುಮ್ಮಕ್ಕು, ರೇವ್ ಪಾರ್ಟಿ ಮೇಲೆ ದಾಳಿ, ಕುಸಿದ ಶೈಕ್ಷಣಿಕ ರಂಗ, ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟವು ಸರಕಾರ ವಿಫಲತೆಗೆ ಸಾಕ್ಷಿಗಳಾಗಿವೆ" ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಆರ್ಥಿಕ ತೂ ಹೇಳದಂತಿದೆ. ಬಜೆಟ್ ನಲ್ಲಿ ಘೋಷಣೆ ಕಾಮಗಾರಿಗಳ ಪರಿಶೀಲನೆ ಸಹ ಮಾಡಲಿಕ್ಕಾಗಿಲ್ಲ.‌ ಒಟ್ಟಾರೆ ರಾಜ್ಯ ಸರಕಾರ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ತಮ್ಮ ಅವಧಿಯಲ್ಲಿ ಪ್ರಾರಂಭಿಸಿದ ವಿವೇಕ ಕಾರ್ಯಕ್ರಮದಡಿಯಲ್ಲಿ 9000 ಶಾಲಾ ಕೊಠಡಿಗಳ ನಿರ್ಮಾಣವು ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿವೆ ಎಂದು ಬೊಮ್ಮಾಯಿ ಟೀಕಿಸಿದರು.

ಶೀಘ್ರ ಸರಕಾರ ಪತನ:

"ಮುಖ್ಯಮಂತ್ರಿಗಳೇ ರಾಜ್ಯದಿಂದ ಪಿಎಂ ಅಭ್ಯರ್ಥಿ ಯಾರೂ ಇಲ್ಲ‌ ಎಂದಿರುವುದು ನಾಯಕತ್ವದ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಶೀಘ್ರದಲ್ಲೇ ತನ್ನ ಆಂತರಿಕ ಕಚ್ಚಾಟದಿಂದ ರಾಜ್ಯ ಸರಕಾರ ಪತನವಾಗಲಿದೆ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 25 ಸೀಟು ಗೆಲ್ಲುತ್ತದೆ. ಕಾಂಗ್ರೆಸ್ ಇನ್ನೆರಡು ಸೀಟುಗಳ ಹೆಚ್ಚಳಕ್ಕೆ ತೃಪ್ತಿ ಪಡಬೇಕಾಗುತ್ತದೆ. ಜನರು ಮೋದಿ ಅವರ ಕೈ ಬಲಪಡಿಸುವುನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದ ಡಾ.‌ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ್, ಬಿ.ಜಿ.ಪಾಟೀಲ್, ಶಶೀಲ್ ಜಿ ನಮೋಶಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೇಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News